ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನ ಹಿಜಾಬ್ ವಿವಾದ ಮತ್ತೊಂದು ತಿರುವು ಪಡೆದುಕೊಂಡಿದೆ. ಹಿಜಾಬ್ ಧರಿಸಿಕೊಂಡು ತರಗತಿಗೆ ಹಾಜರಾಗಲು ಪಟ್ಟು ಹಿಡಿದಿದ್ದ ಐವರು ವಿದ್ಯಾರ್ಥಿನಿಯರು ಬೇರೆ ಕಾಲೇಜಿಗೆ ತೆರಳಲು ಟಿಸಿ ಕೊಡುವಂತೆ ಕೇಳಿದ್ದಾರೆ.
ಪ್ರಾಂಶುಪಾಲರಾದ ಅನುಸೂಯಾ ರವರಿಗೆ ಪತ್ರ ಬರೆದು ವರ್ಗಾವಣೆ ಪ್ರಮಾಣಪತ್ರ ಕೊಡುವಂತೆ ಕೋರಿದ್ದಾರೆ. ವರ್ಗಾವಣೆ ಕೋರಿದ ಪತ್ರದಲ್ಲಿ ಕರೆಕ್ಷನ್ ಇದ್ದುದರಿಂದ ಮತ್ತೊಮ್ಮೆ ಪತ್ರ ಬರೆದು ಕೊಡುವಂತೆ ಪ್ರಾಂಶುಪಾಲರು ಸೂಚನೆ ನೀಡಿದ್ದು, ಸರಿಪಡಿಸಲಾಗದ ಪತ್ರ ಬಂದ ನಂತರ ಆಡಳಿತ ಮಂಡಳಿ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಹೇಳಲಾಗಿದೆ.
ಮಂಗಳೂರು ವಿಶ್ವವಿದ್ಯಾಲಯದ ಹಿಜಾಬ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿನಿಯರು ಕಾಲೇಜಿನ ವಿರುದ್ಧ ಮಾತನಾಡಿದ್ದ ಹಿನ್ನೆಲೆಯಲ್ಲಿ ಕಾರಣ ಕೇಳಿ ಪ್ರಾಂಶುಪಾಲರು ಶೋಕಾಸ್ ನೋಟಿಸ್ ನೀಡಿದ್ದರು. ವಿದ್ಯಾರ್ಥಿನಿಯರೇ ತಮಗೆ ವರ್ಗಾವಣೆ ಪತ್ರ ಕೊಡಬೇಕೆಂದು ಪ್ರಾಂಶುಪಾಲರಿಗೆ ಪತ್ರ ಬರೆದಿದ್ದಾರೆ.
ಕಾಲೇಜುಗಳಲ್ಲಿ ಹಿಜಾಬ್ ಧರಿಸುವ ಬಗ್ಗೆ ಸ್ಪಷ್ಟವಾದ ನಿಯಮಗಳಿದ್ದು, ಅದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ನಿಯಮಗಳನ್ನು ಪಾಲಿಸದವರು ಬೇರೆ ಕಾಲೇಜಿಗೆ ಹೋಗುವುದಾದರೆ ಟಿಸಿ ಕೊಡಲು ವ್ಯವಸ್ಥೆ ಮಾಡಲಾಗುವುದು ಎಂದು ಹೇಳಲಾಗಿದೆ.