ನವದೆಹಲಿ: ರಾಜ್ಯದ ಶಾಲಾ, ಕಾಲೇಜುಗಳಲ್ಲಿ ಹಿಜಾಬ್, ಕೇಸರಿ ಶಾಲು ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಹೈಕೋರ್ಟ್ ನಲ್ಲಿ ಮಹತ್ವದ ವಿಚಾರಣೆ ನಡೆಯಲಿದೆ.
ಉಡುಪಿಯ ಸರ್ಕಾರಿ ಬಾಲಕಿಯರ ಪಿಯು ಕಾಲೇಜಿನಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಿ ಪಾಠ ಕೇಳಲು ನಿರ್ಬಂಧ ವಿಧಿಸಿರುವುದನ್ನು ಪ್ರಶ್ನಿಸಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಕೆಯಾಗಿದ್ದು, ಇದರೊಂದಿಗೆ ಸಲ್ಲಿಕೆಯಾಗಿರುವ ನಾಲ್ಕು ರಿಟ್ ಅರ್ಜಿಗಳ ವಿಚಾರಣೆ ಇಂದು ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ಏಕಸದಸ್ಯಪೀಠದಲ್ಲಿ ನಡೆಯಲಿದೆ.
ರಾಜ್ಯ ಸರ್ಕಾರ ಎಲ್ಲ ಶಾಲಾ ಕಾಲೇಜುಗಳಲ್ಲಿ ಸಮವಸ್ತ್ರಸಂಹಿತೆ ಕುರಿತಂತೆ ಸುತ್ತೋಲೆ ಹೊರಡಿಸಿದೆ. ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಪಾಠ ಕೇಳಲು ಅವಕಾಶ ಕೋರಿ ಅರ್ಜಿ ಸಲ್ಲಿಸಿದ್ದು, ಹೈಕೋರ್ಟ್ ನಲ್ಲಿಂದು ವಿಚಾರಣೆ ನಡೆಯಲಿದೆ.
ರಾಜ್ಯದ ಶಾಲಾ-ಕಾಲೇಜುಗಳಲ್ಲಿ ಹಿಜಾಬ್, ಕೇಸರಿ ಶಾಲು ಧರಿಸಿ ತರಗತಿಗೆ ಹಾಜರಾಗಲು ಅವಕಾಶವಿಲ್ಲ. ಸಮವಸ್ತ್ರ ಸಂಹಿತೆ ಪಾಲನೆ ಕಡ್ಡಾಯವಾಗಿರುತ್ತದೆ. ಹಲವೆಡೆ ಪ್ರತಿಭಟನೆಗಳು ಕೂಡ ನಡೆದಿವೆ. ಹೈಕೋರ್ಟ್ ನಲ್ಲಿ ಇಂದು ನಡೆಯಲಿರುವ ವಿಚಾರಣೆಯತ್ತ ಎಲ್ಲರ ಚಿತ್ತ ನೆಟ್ಟಿದೆ.