ಹಿಜಾಬ್ ನಿರ್ಬಂಧ ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋದ ಉಡುಪಿಯ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯರ ಮನೆ ವಿಳಾಸ ಸೇರಿದಂತೆ ಅವರ ವೈಯಕ್ತಿಕ ವಿವರಗಳನ್ನು ತನ್ನ ಅಧಿಕೃತ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡ ರಾಜ್ಯ ಬಿಜೆಪಿ ವಿರುದ್ದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಹಿಜಾಬ್ ವಿವಾದದಲ್ಲಿ ತೊಡಗಿಸಿಕೊಂಡಿರುವ ಉಡುಪಿಯ ಐವರು ವಿದ್ಯಾರ್ಥಿನಿಯರು ಅಪ್ರಾಪ್ತೆಯರು. ಕಾಂಗ್ರೆಸ್ ನಾಯಕರಾದ ಸೋನಿಯಾ, ರಾಹುಲ್ ಮತ್ತು ಪ್ರಿಯಾಂಕಾ ಅವರು ರಾಜಕೀಯದಲ್ಲಿ ಪ್ರಸ್ತುತವಾಗಲು ಅಪ್ರಾಪ್ತ ಬಾಲಕಿಯರನ್ನು ಬಳಸಿಕೊಂಡಿರುವುದಕ್ಕೆ ಯಾವುದೇ ಪಶ್ಚಾತ್ತಾಪ? ಚುನಾವಣೆ ಗೆಲ್ಲಲು ಅವರು ಎಷ್ಟು ಕೆಳಮಟ್ಟಕ್ಕೆ ಇಳಿಯುತ್ತಾರೆ? ಇದೇನಾ ‘ಲಡ್ಕಿ ಹೂಂ ಲಡ್ ಸಕ್ತಿ ಹೂಂ’ ಎಂಬುದರ ನಿಜವಾದ ಅರ್ಥ, ಎಂದು ಟ್ವೀಟ್ ಮಾಡಲಾಗಿತ್ತು.
13 ಮಂದಿ ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರಗೈದಿದ್ದ ಶಿಕ್ಷಕನಿಗೆ ಜೀವಾವಧಿ ಶಿಕ್ಷೆ
ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನಲ್ಲಿ ಅರ್ಜಿ ವಿಚಾರಣೆ ನಡೆಯುತ್ತಿರುವ ಈ ಸಂದರ್ಭದಲ್ಲಿ, ಕಾಂಗ್ರೆಸ್ ಪಕ್ಷವನ್ನು ಟೀಕಿಸುವ ಭರದಲ್ಲಿ ಈ ಪ್ರಕರಣದಲ್ಲಿ ದೂರುದಾರರಾದ ಆರು ವಿದ್ಯಾರ್ಥಿನಿಯರ ವಿಳಾಸ, ವಯಸ್ಸು, ತಂದೆ ತಾಯಿ ಹೆಸರು ಇತ್ಯಾದಿ ವಿವರಗಳಲ್ಲದೇ ಅವರ ಭಾವಚಿತ್ರಗಳನ್ನು ಕೂಡಾ ಹಂಚಿಕೊಳ್ಳಲಾಗಿತ್ತು. ನಂತರ ಡಿಲೀಟ್ ಮಾಡಲಾಗಿದೆ.
ಈ ಟ್ವೀಟ್ ವಿರುದ್ಧ ಅನೇಕ ಟ್ವಿಟ್ಟಿಗರು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಟ್ವೀಟ್ ಗೆ ಆಕ್ರೋಶ ವ್ಯಕ್ತಪಡಿಸಿರುವ ಮಹಾರಾಷ್ಟ್ರದ ಶಿವಸೇನೆ ಸಂಸದೆ ಪ್ರಿಯಾಂಕಾ ಚತುರ್ವೇದಿ, ರಾಜ್ಯ ಬಿಜೆಪಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕದ ಪೊಲೀಸ್, ಟ್ವೀಟರ್ ಮತ್ತು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವನ್ನು ಒತ್ತಾಯಿಸಿದ್ದಾರೆ.