ಕರ್ನಾಟಕದಲ್ಲಿ ಶುರುವಾದ ಹಿಜಾಬ್ ವಿವಾದ ಇದೀಗ ಆಂಧ್ರಪ್ರದೇಶಕ್ಕೂ ವ್ಯಾಪಿಸಿದೆ. ವಿಜಯವಾಡದ ಲೊಯೊಲಾ ಕಾಲೇಜಿನ ಆಡಳಿತ ಮಂಡಳಿ ಹಾಗೂ ಪ್ರಿನ್ಸಿಪಾಲರು ಬುರ್ಖಾ ಧರಿಸಿದ್ದ ಮುಸ್ಲಿಂ ವಿದ್ಯಾರ್ಥಿಗಳಿಗೆ ಕಾಲೇಜು ಒಳಗೆ ಪ್ರವೇಶ ನೀಡಲಿಲ್ಲವೆಂದು ವರದಿಯಾಗಿದೆ.
ಪಠಾಣ್ ಸದಿಖನಿಸಾ ಎನ್ನುವ ವಿದ್ಯಾರ್ಥಿನಿ, ಕಾಲೇಜು ಪ್ರಿನ್ಸಿಪಲ್ ಬುರ್ಖಾ ಧರಿಸಿದ್ದ ವಿದ್ಯಾರ್ಥಿಗಳ ಪ್ರವೇಶಕ್ಕೆ ಅಡ್ಡಿಪಡಿಸಿದರು ಎಂದು ಆರೋಪಿಸಿದ್ದಾರೆ. ಕಳೆದ ಮೂರು ವರ್ಷಗಳಿಂದ ಒಂದೇ ಕಾಲೇಜಿನಲ್ಲಿ ಓದುತ್ತಿದ್ದೇವೆ. ಮೊದಲ ದಿನದಿಂದಲೂ ಹಿಜಾಬ್ ಧರಿಸಿ ಕಾಲೇಜಿಗೆ ಬರುತ್ತಿದ್ದೇವೆ, ಹಿಂದೆಂದೂ ಇಂತಹ ಪರಿಸ್ಥಿತಿ ಎದುರಾಗಿರಲಿಲ್ಲ. ಹಿಜಾಬ್‌ನೊಂದಿಗೆ ಕಾಲೇಜು ಗುರುತಿನ ಚೀಟಿಯಲ್ಲಿ ನಮ್ಮ ಫೋಟೋ ಕೂಡ ಇದೆ. ಕರ್ನಾಟಕದಲ್ಲಿ ಹಿಜಾಬ್ ವಿವಾದ ಶುರುವಾದ ತಕ್ಷಣ ಈ ರೀತಿಯಾಗಿ ನಮ್ಮನ್ನು ತಡೆದಿದ್ದಾರೆ ಎಂದು ಕೆಲವು ವಿದ್ಯಾರ್ಥಿನಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಎಲ್ಲಾ ಆರೋಪಗಳನ್ನ ತಳ್ಳಿ ಹಾಕಿರುವ ಕಾಲೇಜಿನ ಪ್ರಿನ್ಸಿಪಲ್ ಡಾ ಕಿಶೋರ್, ವಿದ್ಯಾರ್ಥಿಗಳಾಗಲಿ ಅಥವಾ ಶಿಕ್ಷಕರಾಗಲಿ ಕಾಲೇಜಿಗೆ ಮುಸ್ಲಿಂ ಬಟ್ಟೆ ಧರಿಸಿ ಬರಬಹುದು. ಆದರೆ ತರಗತಿಗೆ ಹಾಜರಾಗುವ ಮುನ್ನ ಹಿಜಾಬ್ ಅಥವಾ ಬುರ್ಖಾ ತೆಗೆಯಬೇಕು. ಇದು ಮೊದಲಿನಿಂದಲೂ ಇರುವ ಕಾನೂನು.
ಇಂದು ಬೆಳಗ್ಗೆ ನಾನು ರೌಂಡ್ಸ್ ನಲ್ಲಿರುವಾಗ ಮೂವರು ವಿದ್ಯಾರ್ಥಿನಿಯರು ಲೇಟ್ ಆಗಿ ಕಾಲೇಜಿಗೆ ಬರುವುದನ್ನ ನೋಡಿದೆ. ಅವರಲ್ಲಿ ಇಬ್ಬರು ಮುಸ್ಲಿಂ ಪೋಷಾಕಿನಲ್ಲಿದ್ದರು, ವೇಟಿಂಗ್ ರೂಂಗೆ ಹೋಗಿ ಬುರ್ಖಾ ತೆಗೆದು ತರಗತಿಗೆ ಹೋಗಿ ಎಂದಾಗ, ಅವರಿಬ್ಬರು ನನ್ನ ಮಾತು ಕೇಳದೆ ಕಾಲೇಜಿನಿಂದ ಮರಳಿದರು. ಮೊದಲಿನಿಂದಲು ಕಾಲೇಜಿನ ಡ್ರೆಸ್ ಕೋಡ್ ಎಲ್ಲರಿಗೂ ಒಂದೇ ಇದೇ, ಅದು ಮುಸ್ಲಿಂ ವಿದ್ಯಾರ್ಥಿಗಳೆ ಆಗಲಿ ಮುಸ್ಲಿಂ ಶಿಕ್ಷಕಿಯರೆ ಆಗಲಿ ಕಾಲೇಜು ನಿಯಮಗಳನ್ನ ಪಾಲಿಸಬೇಕು ಎಂದು ಅವರು ಸ್ಪಷ್ಟಪಡಿಸಿದ್ದಾರೆ.