ಬೆಂಗಳೂರು: ರಾಜ್ಯದ ಕಾಲೇಜುಗಳಲ್ಲಿ ಹಿಜಾಬ್, ಕೇಸರಿ ಶಾಲು ವಿವಾದಕ್ಕೆ ಕಾರಣವಾಗುತ್ತಲೇ ಸರ್ಕಾರ ಕ್ರಮಕೈಗೊಂಡಿದೆ.
ಎಲ್ಲಾ ವಿದ್ಯಾರ್ಥಿಗಳು ಸಮವಸ್ತ್ರ ಸಂಹಿತೆ ಪಾಲಿಸಬೇಕು. ಹಿಜಾಬ್ ಮತ್ತು ಕೇಸರಿ ಶಾಲು ಧರಿಸಲು ಅವಕಾಶ ಇಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದಾರೆ. ಕೋರ್ಟ್ ತೀರ್ಪಿನ ನಂತರ ಸರ್ಕಾರ ಮುಂದಿನ ನಿರ್ಧಾರ ತೆಗೆದುಕೊಳ್ಳಲಿದೆ. ಕೋರ್ಟ್ ಆದೇಶದವರೆಗೆ ಸಮವಸ್ತ್ರವನ್ನು ಧರಿಸಬೇಕು ಎಂದು ಈಗಾಗಲೇ ಸುತ್ತೋಲೆ ಹೊರಡಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಕಾಲೇಜಿಗೆ ಸೇರುವಾಗಲೇ ವಿದ್ಯಾರ್ಥಿಗಳು ಸಮವಸ್ತ್ರ ಸಂಹಿತೆ ಪಾಲನೆಗೆ ಸಹಿ ಹಾಕಿರುತ್ತಾರೆ. ಈಗ ಸಮಸ್ಯೆ ಆರಂಭವಾಗಿರುವುದರ ಹಿಂದೆ ಯಾರದೋ ಕೈವಾಡ ಇರಬಹುದು. ಮಕ್ಕಳ ಶಿಕ್ಷಣ, ಭವಿಷ್ಯದ ಬಗ್ಗೆ ಎಲ್ಲರೂ ಯೋಚಿಸಿ ತೀರ್ಮಾನಿಸಬೇಕು ಎಂದು ಹೇಳಿದ್ದಾರೆ.
ಹಿಜಾಬ್ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದಾರೆ. ಹೈಕೋರ್ಟ್ ನಲ್ಲಿ ಫೆಬ್ರವರಿ 8 ರಂದು ವಿಚಾರಣೆಯ ಸಂದರ್ಭದಲ್ಲಿ ಸರ್ಕಾರದ ನಿಲುವನ್ನು ತಿಳಿಸಬೇಕು ಎಂದು ಉನ್ನತ ಮಟ್ಟದ ಸಭೆಯಲ್ಲಿ ಸೂಚನೆ ನೀಡಿದ್ದಾರೆ.
ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಂ ಅವರು, ನ್ಯಾಯಾಲಯದ ತೀರ್ಪು ಬರುವವರೆಗೆ 2021 ರ ಜೂನ್ 1 ರಿಂದ ಪಾಲಿಸಲಾಗುತ್ತಿರುವ ಸಮವಸ್ತ್ರ ಸಂಹಿತೆಯನ್ನು ಯಥಾಸ್ಥಿತಿ ಪಾಲಿಸುವಂತೆ ಸೂಚಿಸಿದ್ದಾರೆ.