alex Certify ರಾಜ್ಯದಲ್ಲಿ ಸುಗಮ ಸಂಚಾರಕ್ಕಾಗಿ ವಿವಿಧ ರಸ್ತೆ ಅಭಿವೃದ್ಧಿ ಯೋಜನೆಗಳ ಅನುಮೋದನೆಗೆ ಕೇಂದ್ರಕ್ಕೆ ಮನವಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜ್ಯದಲ್ಲಿ ಸುಗಮ ಸಂಚಾರಕ್ಕಾಗಿ ವಿವಿಧ ರಸ್ತೆ ಅಭಿವೃದ್ಧಿ ಯೋಜನೆಗಳ ಅನುಮೋದನೆಗೆ ಕೇಂದ್ರಕ್ಕೆ ಮನವಿ

ನವದೆಹಲಿ: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ ಅವರನ್ನು ಭೇಟಿಯಾದ ಸಿಎಂ ಸಿದ್ಧರಾಮಯ್ಯ, ರಾಜ್ಯದ ವಿವಿಧ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಮತ್ತು ಇತರ ಪ್ರಮುಖ ವಿಚಾರಗಳ ಕುರಿತು ಚರ್ಚಿಸಿ, ಕೇಂದ್ರ ಸರ್ಕಾರಕ್ಕೆ ಸಲ್ಲಿಸಿರುವ ವಿವಿಧ ಪ್ರಸ್ತಾವನೆಗಳಿಗೆ ಶೀಘ್ರವೇ ಅನುಮೋದನೆ ನೀಡುವಂತೆ ಮನವಿಪತ್ರ ಸಲ್ಲಿಸಿದ್ದಾರೆ.

ರಾಜ್ಯದಲ್ಲಿ ಬೆಳಗಾವಿ – ಹುನಗುಂದ – ರಾಯಚೂರು(NH748A), ಬೆಂಗಳೂರು ಚೆನ್ನೈ ಎಕ್ಸ್‌ಪ್ರೆಸ್‌ ಹೆದ್ದಾರಿ, ಸೂರತ್‌ ಚೆನ್ನೈ ಎಕ್ಸ್‌ಪ್ರೆಸ್‌ ಹೆದ್ದಾರಿ, ಬೆಂಗಳೂರು ನಗರದ ಉಪನಗರ ವರ್ತುಲ ರಸ್ತೆ ಗ್ರೀನ್‌ಫೀಲ್ಡ್‌ ಕಾರಿಡಾರ್‌ಗಳ ಅಭಿವೃದ್ಧಿಗೆ ಅನುಮೋದನೆ ನೀಡಿರುವುದಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.

ಅಲ್ಲದೇ, ಇನ್ನಷ್ಟು ಪ್ರಮುಖ ವಿಚಾರಗಳ ಕುರಿತು ಕೇಂದ್ರ ಸಚಿವರ ಗಮನ ಸೆಳೆಯಲಾಯಿತು. ರಾಜ್ಯದಲ್ಲಿ 5,225 ಕಿ.ಮೀ. ಉದ್ದದ 39 ತಾತ್ವಿಕ ಅನುಮೋದನೆ ದೊರಕಿದ ರಸ್ತೆಗಳನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಘೋಷಿಸುವ ಪ್ರಕ್ರಿಯೆ ನೆನೆಗುದಿಗೆ ಬಿದ್ದಿದೆ. ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ಕೋರಿದೆ.

ರಾಜ್ಯ ಸರ್ಕಾರದ ಪ್ರಸ್ತಾವನೆಯಲ್ಲಿ ಸಲ್ಲಿಸಲಾಗಿರುವ ಇತರ ಪ್ರಮುಖ ವಿಷಯಗಳು:

ದಿನಕ್ಕೆ 10,000 ಪಿಸಿಯು ವಾಹನ ದಟ್ಟಣೆ ಹೊಂದಿರುವ ರಾಜ್ಯ ಹೆದ್ದಾರಿಗಳ ಉನ್ನತೀಕರಣ

ಶಿರಾಡಿ ಘಾಟಿಯಲ್ಲಿ ಮಾರನಹಳ್ಳಿಯಿಂದ ಅಡ್ಡಹೊಳೆ ನಡುವೆ ಟನೆಲ್‌ ನಿರ್ಮಾಣದ ಮೂಲಕ ಮಂಗಳೂರು ಬಂದರು ಸಂಪರ್ಕ ಇನ್ನಷ್ಟು ಸುಗಮಗೊಳಿಸುವುದು

ಮೈಸೂರು ನಗರದ ಮಣಿಪಾಲ್‌ ಆಸ್ಪತ್ರೆ ಜಂಕ್ಷನ್‌ (ಕೊಲಂಬಿಯ ಏಷ್ಯಾ ಆಸ್ಪತ್ರೆ) ನಲ್ಲಿ ಫ್ಲೈಓವರ್‌ ನಿರ್ಮಾಣಕ್ಕೆ ಅನುಮೋದನೆ ನೀಡುವುದು

ಮೈಸೂರು ರಿಂಗ್‌ ರಸ್ತೆಯಲ್ಲಿ NH-275K ನಲ್ಲಿ 9 ಗ್ರೇಡ್‌ ಸೆಪರೇಟರುಗಳ ನಿರ್ಮಾಣಕ್ಕೆ ಅನುಮೋದನೆ ನೀಡುವುದು.

ಬೆಳಗಾವಿ ನಗರದಲ್ಲಿ ಹಳೆ NH4 ನಲ್ಲಿ ಮೇಲುಸೇತುವೆ ನಿರ್ಮಾಣಕ್ಕೆ ಅನುಮೋದನೆ ನೀಡುವುದು

ಬೆಳಗಾವಿ ಜಿಲ್ಲೆಯ ಗೋಕಾಕ್‌ ಜಲಪಾತದಲ್ಲಿ ಕೇಬಲ್‌ ಕಾರ್‌ ಸೌಲಭ್ಯ ಕಲ್ಪಿಸುವ ಯೋಜನೆ

ಕಿತ್ತೂರು ಪಟ್ಟಣದಿಂದ ಬೈಲಹೊಂಗಲವನ್ನು ಸಂಪರ್ಕಿಸುವ ರಸ್ತೆಯ ಸುಧಾರಣೆ

ಕಲಬುರಗಿ ಮತ್ತು ರಾಯಚೂರಿನಲ್ಲಿ ಬೈಪಾಸ್‌ ನಿರ್ಮಾಣ

NH-373 ರ ಬೇಲೂರು ಚಿಕ್ಕಮಗಳೂರು ವಿಭಾಗದಲ್ಲಿ ಚತುಷ್ಪಧ ನಿರ್ಮಾಣ

ಚಳ್ಳಕೆರೆ ಪಟ್ಟಣ ವ್ಯಾಪ್ತಿಯಲ್ಲಿ NH-150A ಯ ಒಂದು ಬಾರಿ ಸುಧಾರಣೆ

ರಾಷ್ಟ್ರೀಯ ಹೆದ್ದಾರಿ NH-766 ರ 106 ಕಿ.ಮೀ. ರಸ್ತೆಯನ್ನು ಚತುಷ್ಪಥ, ಆರು ಪಥದ ಹೆದ್ದಾರಿಯಾಗಿ ಅಭಿವೃದ್ಧಿ ಪಡಿಸುವುದು

ಈಗಾಗಲೇ ತಾತ್ವಿಕ ಅನುಮೋದನೆ ದೊರೆತಿರುವ ಕೇರಳದ ಕಲ್ಪೆಟ್ಟದಿಂದ ಮಾನಂದವಾಡಿ, ಹೆಚ್.ಡಿ.ಕೋಟೆ, ಜಯಪುರ ಮೂಲಕ ಮೈಸೂರನ್ನು ಸಂಪರ್ಕಿಸುವ 90 ಕಿ.ಮೀ. ಹೆದ್ದಾರಿ, ಮೈಸೂರಿನಿಂದ ಬನ್ನೂರು ಮೂಲಕ ಮಳವಳ್ಳಿಯನ್ನು ಸಂಪರ್ಕಿಸುವ 45 ಕಿ.ಮೀ. ಹೆದ್ದಾರಿ ಹಾಗೂ ಬೆಳಗಾವಿ ಜಿಲ್ಲೆಯ ಸಂಕೇಶ್ವರದಿಂದ ಗೋಕಾಕ- ಯರಗಟ್ಟಿ-ಮನ್ವಳ್ಳಿ ಮೂಲಕ ನರಗುಂದ ವನ್ನು ಸಂಪರ್ಕಿಸುವ 127 ಕಿ.ಮೀ. ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಉನ್ನತೀಕರಣ

ಹೀಗೆ ರಾಜ್ಯದಲ್ಲಿ ಸುಗಮ ಸಂಚಾರಕ್ಕಾಗಿ ವಿವಿಧ ರಸ್ತೆ ಅಭಿವೃದ್ಧಿ ಯೋಜನೆಗಳಿಗೆ ಮನವಿ ನೀಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...