ಬೆಂಗಳೂರು: ಮಧ್ಯಪ್ರದೇಶದ ಹೈ ಪ್ರೊಫೈಲ್ ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿಂಗ್ ಪಿನ್ ಬೆಂಗಳೂರಿನಲ್ಲಿ ಸಿಕ್ಕಿಬಿದ್ದಿದ್ದಾಳೆ. ಉನ್ನಾಧಿಕಾರಿಗಳು, ಮಾಜಿ ಸಚಿವರನ್ನು ಹನಿಟ್ರ್ಯಾಪ್ ಖೆಡ್ಡಾಗೆ ಬೀಳಿಸಿ ಲಕ್ಷ ಲಕ್ಷ ಹಣ ದೋಚುತ್ತಿದ್ದ ಮಹಿಳೆಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಬಂಧಿತಳನ್ನು ಆರತಿ ದಯಾಳ್ ಎಂದು ಗುರುತಿಸಲಾಗಿದೆ. ಬೆಂಗಳೂರಿನ ಮಹದೇವಪುರ ಪೊಲೀಸರು ಬಂಧಿಸಿ, ಮಧ್ಯಪ್ರದೇಶ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಈಕೆ ಹೈಪ್ರೊಫೈಲ್ ಹನಿಟ್ರ್ಯಾಪ್ ಕೇಸ್ ನ ಮಾಸ್ಟರ್ ಮೈಂಡ್ ಎಂದು ತಿಳಿದುಬಂದಿದೆ.
ಬಡ ಕಾಲೇಜು ವಿದ್ಯಾರ್ಥಿನಿಯರಿಗೆ ಐಷಾರಾಮಿ ಜೀವನದ ಆಸೆ ತೋರಿಸಿ ಬಳಿಕ ಅವರನ್ನು ಹನಿಟ್ರ್ಯಾಪ್ ಗೆ ಬಳಸಿಕೊಳ್ಳುತ್ತಿದ್ದಳು. ರಾಜಕಾರಣಿಗಳು, ಉನ್ನತಾಧಿಕಾರಿಗಳಿಗೆ ಕಾಲೇಜು ಹುಡುಗಿಯರನ್ನು ಪೂರೈಸುತ್ತಿದ್ದಳು. ಜೊತೆಗೆ 40 ವೇಶ್ಯೆಯರನ್ನು ಬಾಡಿಗೆ ಆಧಾರದಲ್ಲಿ ಇಟ್ಟುಕೊಳ್ಳುತ್ತಿದ್ದಳು. ಆರತಿ ದಯಾಳ್ ಜೊತೆ ಶ್ವೇತಾ ಎಂಬುವವಳೂ ಕೈಜೋಡಿಸಿದ್ದಳು.
ಇಂಧೋರ್ ನಲ್ಲಿ ಪುರಸಭೆಯ ಎಂಜಿನಿಯರ್ ಹರ್ಬಜನ್ ಸಿಂಗ್ ಎಂಬುವವರಿಗೆ ಆರತಿ ದಯಾಳ್ ಹಾಗೂ ಮೋನಿಯಾ ಎಂಬುವವರು 3 ಕೋಟಿ ಬೇಡಿಕೆ ಇಟ್ಟಾಗ ಅವರು ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ಕೈಗೊಂಡ ಪೊಲೀಸರಿಗೆ ಆರತಿ ದಯಾಳ್ ಹನಿಟ್ರ್ಯಾಪ್ ಜಾಲದ ಬಗ್ಗೆ ತಿಳಿದುಬಂದಿತ್ತು. ರಾಜಕಾರಣಿಗಳು, ಉದ್ಯಮಿಗಳು, ಪೊಲೀಸ್ ಅಧಿಕಾರಿಗಳು, ಉನ್ನತಾಧಿಕಾರಿಗಳು, ಪತ್ರಕರ್ತರ ಜೊತೆಗಿನ ವಿಡಿಯೋ ಕ್ಲಿಪಿಂಗ್ ಗಳು ಆರೋಪಿಗಳ ಬಳಿ ಇತ್ತು ಎಂದು ತಿಳಿದುಬಂದಿದೆ.
2019ರಲ್ಲಿ ಮಧ್ಯಪ್ರದೇಶದಲ್ಲಿ ನಡೆದಿದ್ದ ಹೈ ಪ್ರೊಫೈಲ್ ಹನಿಟ್ರ್ಯಾಪ್ ಕೇಸ್ ನಲ್ಲಿ ಜೈಲು ಸೇರಿದ್ದ ಆರತಿ ದಯಾಳ್, 2020ರಲ್ಲಿ ಬಿಡುಗಡೆಗೊಂಡು ಹೊರ ಬಂದಿದ್ದಳು. ಬಳಿಕ ಸೋನು, ಸಮಂತಾ, ಆರತಿ ಅಗರ್ವಾಲ್ ಎಂದು ಹೆಸರು ಬದಲಿಸಿಕೊಳ್ಳುತ್ತಾ ತಲೆಮರೆಸಿಕೊಳ್ಳುತ್ತಿದ್ದಳು. ಹನಿಟ್ರ್ಯಾಪ್ ಮಾಡಿ ಸಿಕ್ಕಿ ಬಿದ್ದಿದ್ದ ಈಕೆ ಈಗ ಕಳ್ಳತನದ ಹಾದಿ ಹಿಡಿದಿದ್ದಳು.
ಬೆಂಗಳೂರು, ಚೆನ್ನೈ ಸೇರಿದಂತೆ ವಿವಿಧೆಡೆ ದರೋಢೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಳು. ಮೊದಲು ಸ್ಪಾಗಳಲ್ಲಿ ಕೆಲಸಕ್ಕೆ ಸೇರುತ್ತಿದ್ದ ಆರತಿ ಬಳಿಕ ಅಲ್ಲಿಯೇ ಕೆಲಸ ಮಾಡುತ್ತಿದ್ದ ಯುವತಿಯರ ಪಿಜಿ, ಹಾಸ್ಟೇಲ್, ರೂಮ್ ಗಳಲ್ಲಿ ಅವರ ಜೊತೆಯೇ ಇದ್ದು ಅವರ ಹಣ, ಚಿನ್ನಾಭರಣಗಳನ್ನು ದೋಚಿ ಹತ್ತು ದಿನಗಳಲ್ಲಿ ಎಸ್ಕೇಪ್ ಆಗುತ್ತಿದ್ದಳು. ಸಧ್ಯ ಮಹದೇವಪುರ ಪೊಲೀಸರು ಆರತಿ ದಯಾಳ್ ನ್ನು ಬಂಧಿಸಿದ್ದಾರೆ.