
ಬೆಂಗಳೂರು: ರಾಜ್ಯದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಹೇಳಿದ್ದಾರೆ.
ವಿಧಾನಪರಿಷತ್ ನಲ್ಲಿ ಕಾಂಗ್ರೆಸ್ ಸದಸ್ಯ ಮಂಜುನಾಥ ಭಂಡಾರಿ ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ಈಗಾಗಲೇ ದಾವಣಗೆರೆ ಮತ್ತು ಚಿಂತಾಮಣಿ ಕಾಲೇಜುಗಳಲ್ಲಿ ಆರಂಭಿಸಿರುವ ಕೋರ್ಸ್ ಗೆ ಉತ್ತಮ ಪ್ರತಿಕ್ರಿಯೆ ಬಂದಿದೆ. ಹೀಗಾಗಿ ಉಳಿದ 11 ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಗಳನ್ನು ಅಳವಡಿಸಲಾಗುವುದು. ಆರಂಭಿಕವಾಗಿ 5 ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭಿಸಲಿದ್ದು, ನಂತರ ಉಳಿದ ಕಾಲೇಜುಗಳಲ್ಲಿಯೂ ಪ್ರಾರಂಭಿಸಲಾಗುವುದು ಎಂದು ಹೇಳಿದ್ದಾರೆ.
ಖಾಸಗಿ ಕಾಲೇಜುಗಳ ಮಾದರಿಯಲ್ಲಿ ಸರ್ಕಾರಿ ಇಂಜಿನಿಯರಿಂಗ್ ಮತ್ತು ಡಿಪ್ಲೋಮಾ ವಿದ್ಯಾರ್ಥಿಗಳಿಗೆ ಕೌಶಲ್ಯ ನೀಡಲು ಸೆಂಟರ್ ಆಫ್ ಎಕ್ಸಲೆನ್ಸ್ ಆರಂಭಿಸಲು ವಿಶ್ವ ಬ್ಯಾಂಕ್ ನಿಂದ ಸಾಲ ಪಡೆಯಲಾಗುತ್ತಿದೆ ಎಂದು ಮಂಜುನಾಥ ಭಂಡಾರಿ ಅವರ ಪ್ರಶ್ನೆಗೆ ಸಚಿವ ಎಂ.ಸಿ. ಸುಧಾಕರ್ ಉತ್ತರ ನೀಡಿದ್ದು, ಈಗಾಗಲೇ 11 ಕಾಲೇಜುಗಳಲ್ಲಿ ಕೌಶಲ್ಯ ಕೇಂದ್ರಗಳನ್ನು ತೆರೆಯಲು ಟೊಯೋಟಾದೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.