
ಚಿಂತಾಮಣಿ: ಒಂದೆರಡು ದಿನಗಳಲ್ಲಿ ಸಿಇಟಿ ಕೌನ್ಸೆಲಿಂಗ್ ವೇಳಾಪಟ್ಟಿ ಪ್ರಕಟಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ, ಎಂ.ಸಿ. ಸುಧಾಕರ್ ಮಾಹಿತಿ ನೀಡಿದ್ದಾರೆ.
ಚಿಂತಾಮಣಿ ತಾಲೂಕಿನ ವೈಜಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕೇಂದ್ರದ ನೀಟ್ ಕೌನ್ಸೆಲಿಂಗ್ ವೇಳಾಪಟ್ಟಿ ಸೋಮವಾರ ಪ್ರಕಟಿಸಲಾಗಿದೆ. ಆಗಸ್ಟ್ 14 ರಿಂದ ಕೌನ್ಸೆಲಿಂಗ್ ಪ್ರಕ್ರಿಯೆ ಆರಂಭವಾಗಲಿದ್ದು, ಅಕ್ಟೋಬರ್ ಅಂತ್ಯದವರೆಗೆ ವಿದ್ಯಾರ್ಥಿಗಳಿಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದ್ದಾರೆ.
ನೀಟ್ ಕೌನ್ಸೆಲಿಂಗ್ ವೇಳಾಪಟ್ಟಿ ಗಮನದಲ್ಲಿಟ್ಟುಕೊಂಡು ಉನ್ನತ ಶಿಕ್ಷಣ ಇಲಾಖೆಯಿಂದ ಸಿಇಟಿ ಕೌನ್ಸೆಲಿಂಗ್ ವೇಳಾಪಟ್ಟಿ ಪ್ರಕಟಿಸಲಾಗುವುದು. ಕೊರೋನಾ ವರ್ಷಗಳಲ್ಲಿ ವೇಳಾಪಟ್ಟಿ ತಡವಾಗಿ ಶೈಕ್ಷಣಿಕ ವರ್ಷವೂ ವಿಳಂಬವಾಗಿ ಆರಂಭವಾಗುತ್ತಿತ್ತು. ಈ ಕಾರಣದಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿತ್ತು. ಈ ವರ್ಷ ಎಲ್ಲಾ ಪರೀಕ್ಷೆಗಳನ್ನು ಮೊದಲೇ ಪೂರ್ಣಗೊಳಿಸಿ ಆಗಸ್ಟ್ ವೇಳೆಗೆ ಕಾಲೇಜು ಆರಂಭಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕೇಂದ್ರ ನೀಟ್ ಕೌನ್ಸೆಲಿಂಗ್ ವೇಳಾಪಟ್ಟಿ ತಡವಾಗಿದ್ದರಿಂದ ರಾಜ್ಯದಲ್ಲಿ ಸಿಇಟಿ ಕೌನ್ಸೆಲಿಂಗ್ ಕೂಡ ವಿಳಂಬವಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.