ಬೆಂಗಳೂರು: ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಕಾಲೇಜು ಬದಲಾವಣೆಗೆ ಉನ್ನತ ಶಿಕ್ಷಣ ಇಲಾಖೆಯಿಂದ ಅವಕಾಶ ನೀಡಲಾಗಿದೆ.
ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು 3, 5, 7ನೇ ಸೆಮಿಸ್ಟರ್ ಗಳ ಪ್ರವೇಶಕ್ಕೆ ಮೊದಲು ವಿಶ್ವವಿದ್ಯಾಲಯ ವ್ಯಾಪ್ತಿಯ ಕಾಲೇಜುಗಳು ಅಥವಾ ಬೇರೆ ಯಾವುದೇ ಸಾರ್ವಜನಿಕ ವಿವಿ ಕಾಲೇಜುಗಳಿಗೆ ವರ್ಗಾವಣೆ ಪಡೆಯಲು ಉನ್ನತ ಶಿಕ್ಷಣ ಇಲಾಖೆಯಿಂದ ಅವಕಾಶ ಕಲ್ಪಿಸಲಾಗಿದೆ.
ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಕಾರ, ಎರಡು ಸೆಮಿಸ್ಟರ್ ಪೂರ್ಣಗೊಳಿಸಿದವರು ಅರ್ಧಕ್ಕೆ ಓದು ನಿಲ್ಲಿಸಿದರೆ ಅವರಿಗೆ ಕೆಳಹಂತದ ಪದವಿ ಪ್ರಮಾಣ ಪತ್ರ ನೀಡಲಾಗುತ್ತದೆ. ನಾಲ್ಕು ಸೆಮಿಸ್ಟರ್ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಡಿಪ್ಲೋಮಾ ಪದವಿ, ಆರು ಸೆಮಿಸ್ಟರ್ ಪೂರ್ಣಗೊಳಿಸಿದವರಿಗೆ ಪದವಿ, ಎಂಟು ಸೆಮಿಸ್ಟರ್ ಪೂರ್ಣಗೊಳಿಸಿದವರಿಗೆ ಆನರ್ಸ್ ಪದವಿ ಪ್ರದಾನ ಮಾಡಲು ಸೂಚಿಸಲಾಗಿದೆ.
ಯಾವುದೇ ಸೆಮಿಸ್ಟರ್ ನ ಮಧ್ಯದಲ್ಲಿ ಓದುವುದನ್ನು ನಿಲ್ಲಿಸಿದವರು ಪ್ರವೇಶ ಪಡೆದ ದಿನದಿಂದ 7 ವರ್ಷಗಳ ಒಳಗೆ ಮರು ಪ್ರವೇಶ ಪಡೆಯಬಹುದಾಗಿದೆ.
ವಿದ್ಯಾರ್ಥಿಗಳ ಕ್ರೆಡಿಟ್ ಪಾಯಿಂಟ್ಸ್ ಗಳನ್ನು ಅಕಾಡೆಮಿಕ್ ಬ್ಯಾಂಕ್ ಆಫ್ ಕ್ರೆಡಿಟ್ಸ್ ಖಾತೆಯೊಂದಿಗೆ ಸಂಯೋಜಿಸಬೇಕು. ಯುಜಿಸಿ ಸೂಚಿಸಿರುವಂತೆ ಒಬ್ಬ ವಿದ್ಯಾರ್ಥಿಯು ಏಕಕಾಲದಲ್ಲಿ ಬಹು ಪದವಿ ಪಡೆಯಬಹುದಾಗಿದೆ. ವಿದ್ಯಾರ್ಥಿಯ ಹಾಜರಾತಿ ಖಚಿತಪಡಿಸಿಕೊಂಡು ಎರಡು ಪದವಿಗಳಲ್ಲಿ ಅಧ್ಯಯನ ನಡೆಸಲು ಅವಕಾಶ ನೀಡಲಾಗಿದೆ ಎಂದು ಉನ್ನತ ಶಿಕ್ಷಣ ಇಲಾಖೆಯಿಂದ ಆದೇಶ ಹೊರಡಿಸಲಾಗಿದೆ.