ಬೆಂಗಳೂರು: ಉನ್ನತ ಶಿಕ್ಷಣ ಇಲಾಖೆ ವತಿಯಿಂದ 2023 -24ನೇ ಸಾಲಿನ ಸ್ನಾತಕೋತ್ತರ ಪದವಿಗಳ ಶುಲ್ಕ ನಿಗದಿ ಮಾಡಲಾಗಿದೆ.
ಎಂಬಿಎ, ಎಂಸಿಎ, ಎಂಇ, ಎಂಟೆಕ್ ಗಳ ಶುಲ್ಕ ನಿಗದಿ ಮಾಡಲಾಗಿದ್ದು, ಖಾಸಗಿ ಕಾಲೇಜುಗಳ ಶುಲ್ಕದಲ್ಲಿ 10,000 ರೂ. ಏರಿಕೆ ಮಾಡಲಾಗಿದೆ. ಸರ್ಕಾರಿ ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿನ ಶುಲ್ಕದಲ್ಲಿ ಯಾವುದೇ ಬದಲಾವಣೆ ಮಾಡದೆ ಯಥಾಸ್ಥಿತಿಯಲ್ಲಿ ಕಾಯ್ದುಕೊಳ್ಳಲಾಗಿದೆ.
ಸರ್ಕಾರಿ, ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಎಂಬಿಎ, ಎಂಸಿಎ ಮತ್ತು ಎಂಟೆಕ್ ಗಳಿಗೆ 20,000 ರೂ. ಬೋಧನಾ ಶುಲ್ಕ ನಿಗದಿಪಡಿಸಲಾಗಿದ್ದು, ಇದರೊಂದಿಗೆ 10,810 ರೂಪಾಯಿ ವಿಶ್ವವಿದ್ಯಾಲಯ ಶುಲ್ಕ ಭರಿಸಬೇಕಿದೆ. ಖಾಸಗಿ ಅನುದಾನ ರಹಿತ ಸಂಸ್ಥೆಗಳಲ್ಲಿ ಎಂಬಿಎ ಮತ್ತು ಎಂಸಿಎ ಗೆ 57,750 ರೂ., ಎಂಇ, ಎಂಟೆಕ್ ಗಳಿಗೆ 69,300 ರೂ. ಶುಲ್ಕ ನಿಗದಿಪಡಿಸಲಾಗಿದೆ.
2021 -22ನೇ ಸಾಲಿನಲ್ಲಿ 60 ಸಾವಿರ ರೂಪಾಯಿ ಶುಲ್ಕವಿದ್ದುಮ ಈಗ 69,300 ರೂ.ಗೆ ಹೆಚ್ಚಳ ಮಾಡಲಾಗಿದೆ. ಖಾಸಗಿ ಸಂಸ್ಥೆಗಳಲ್ಲಿನ ಶೇಕಡ 50ರಷ್ಟು ಸೀಟುಗಳನ್ನು ಪಿಜಿಸಿಟಿ ಮೂಲಕ, ಉಳಿದ ಶೇಕಡ 50ರಷ್ಟು ಸೀಟುಗಳನ್ನು ಆಡಳಿತ ಮಂಡಳಿಗಳು ಪ್ರವೇಶ ಪರೀಕ್ಷೆ ನಡೆಸಿ ರ‍್ಯಾಂಕ್ ಆಧಾರದಲ್ಲಿ ಭರ್ತಿ ಮಾಡಿಕೊಳ್ಳಲಿದ್ದು, ಹೆಚ್ಚುವರಿ ಶುಲ್ಕ ಪಡೆದಲ್ಲಿ ಪ್ರವೇಶ ಮೇಲ್ವಿಚಾರಣಾ ಸಮಿತಿಗೆ ದೂರು ಸಲ್ಲಿಸಬಹುದಾಗಿದೆ ಎಂದು ಹೇಳಲಾಗಿದೆ.