ನವದೆಹಲಿ: ಬೇರೆ ರಾಜ್ಯಗಳಲ್ಲಿ ಎಫ್ಐಆರ್ ದಾಖಲಾಗಿದ್ದರೂ ಯಾವುದೇ ರಾಜ್ಯದ ಹೈಕೋರ್ಟ್, ಸೆಷನ್ಸ್ ಕೋರ್ಟ್ ಗಳು ಆರೋಪಿಗೆ ನಿರೀಕ್ಷಣಾ ಜಾಮೀನು ನೀಡಬಹುದು ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.
ನ್ಯಾಯಮೂರ್ತಿ ಬಿ.ವಿ. ನಾಗರತ್ನ, ನ್ಯಾಯಮೂರ್ತಿ ಉಜ್ವಲ್ ಭುಯಾನ್ ಅವರನ್ನೊಳಗೊಂಡ ಪೀಠ, ನಾಗರೀಕರ ಜೀವಿಸುವ ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರ್ಯ ರಕ್ಷಿಸುವ ಸಂವಿಧಾನಿಕ ಅಗತ್ಯ ಪರಿಗಣಿಸಿ ಅತಿ ಅಪರೂಪದ ಸಂದರ್ಭಗಳಲ್ಲಿ ಕೆಲ ಸೀಮಿತ ಷರತ್ತುಗಳೊಂದಿಗೆ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ನೀಡಬಹುದು ಎಂದು ಹೇಳಿದೆ.
ಆರೋಪಿಗೆ ಬಂಧನ ರಕ್ಷಣೆ ನೀಡಿರುವ ನಿರೀಕ್ಷಣಾ ಜಾಮೀನು ಮಂಜೂರು ಮಾಡುವ ಮೊದಲು ಹೈಕೋರ್ಟ್, ಸೆಷನ್ಸ್ ನ್ಯಾಯಾಲಯಗಳು ತನಿಖಾಧಿಕಾರಿಗೆ ಮತ್ತು ತನಿಖಾ ಸಂಸ್ಥೆಗಳಿಗೆ ನೋಟಿಸ್ ಕೊಡಬೇಕು. ಅರ್ಜಿದಾರರು ಪ್ರಾದೇಶಿಕ ನ್ಯಾಯ ವ್ಯಾಪ್ತಿ ಹೊಂದಿರುವ ಸೆಷನ್ಸ್ ಕೋರ್ಟ್ ಅಥವಾ ಹೈಕೋರ್ಟ್ ಸಂಪರ್ಕಿಸಲು ಸಾಧ್ಯವಾಗದಿರುವುದಕ್ಕೆ ತೃಪ್ತಿದಾಯಕ ಸಮರ್ಥನೆ ಒದಗಿಸಬೇಕು. ಜೀವ ಬೆದರಿಕೆ, ವೈಯಕ್ತಿಕ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುವ ಭೀತಿ ಮೊದಲಾದ ಸಕಾರಣಗಳ ಬಗ್ಗೆ ಸ್ಪಷ್ಟ ವಿವರ ಕೊಡಬೇಕು ಎಂದು ನ್ಯಾಯಪೀಠ ಹೇಳಿದೆ.
ವರದಕ್ಷಿಣೆ ಕಿರುಕುಳ ಆರೋಪದ ಮೇಲೆ ರಾಜಸ್ಥಾನದಲ್ಲಿ ಪತಿ ವಿರುದ್ಧ ಪತ್ನಿ ನೀಡಿದ ದೂರಿನ ಮೇರೆಗೆ ಎಫ್ಐಆರ್ ದಾಖಲಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ತೀರ್ಪು ನೀಡಿದೆ.
ಆರೋಪಿ ಪತಿಗೆ ಬೆಂಗಳೂರು ಜಿಲ್ಲಾ ನ್ಯಾಯಾಲಯ ನಿರೀಕ್ಷಣಾ ಜಾಮೀನು ನೀಡಿರುವುದನ್ನು ಪ್ರಶ್ನಿಸಿ ಪತ್ನಿ ಸಲ್ಲಿಸಿದ ಮೇಲ್ಮನವಿ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಕಳೆದ ಮಾರ್ಚ್ ನಲ್ಲಿ ನೋಟಿಸ್ ನೀಡಿತ್ತು. ವಿಚಾರಣೆ ವೇಳೆ ಮಹಿಳೆಯ ಪರ ವಕೀಲ ಕೆ. ಪಾಲ್, ಈ ವಿಷಯದಲ್ಲಿ ವಿವಿಧ ಹೈಕೋರ್ಟ್ ಗಳು ವಿಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದು ಸುಪ್ರೀಂಕೋರ್ಟ್ ಇತ್ಯರ್ಥಪಡಿಸಬೇಕು ಎಂದು ಕೋರಿದ್ದರು. ಈ ಹಿನ್ನಲೆಯಲ್ಲಿ ಬೆಂಗಳೂರು ವ್ಯಕ್ತಿಯ ಕೇಸ್ ನಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿ, ಅನ್ಯ ರಾಜ್ಯದಲ್ಲಿ ಎಫ್ಐಆರ್ ದಾಖಲಾಗಿದ್ದರೂ ಹೈಕೋರ್ಟ್, ಸೆಷನ್ಸ್ ಕೋರ್ಟ್ ಗಳು ನಿರೀಕ್ಷಣಾ ಜಾಮೀನು ನೀಡಬಹುದು ಎಂದು ಹೇಳಿದೆ.