ಬೆಂಗಳೂರು: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರ ಮನೆಯಲ್ಲಿ ಅರ್ಧ ಪಾಕಿಸ್ತಾನವಿದೆ ಎಂದು ಹೇಳಿಕೆ ನೀಡಿದ್ದ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಹೈಕೋರ್ಟ್ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದೆ.
ಯತ್ನಾಳ್ ವಿರುದ್ಧ ದಾಖಲಾಗಿರುವ ಮಾನಹಾನಿ ಪ್ರಕರಣಕ್ಕೆ ತಡೆ ನೀಡಲು ನಿರಾಕರಿಸಿದ ಹೈಕೋರ್ಟ್, ಅಲ್ಲ ರೀ ನಿಮಗೆ ಎಷ್ಟು ಬಾರಿ ಹೇಳಲಾಗಿದೆ. ಇದೆಲ್ಲ ಬೇಕಾ? ನೀವೇಕೆ ಪ್ರತಿ ಸಲ ಈ ರೀತಿ ಮಾತನಾಡಬೇಕು. ನಿಮ್ಮ ಮನಸ್ಸಿಗೆ ಬಂದಿದ್ದೆಲ್ಲವನ್ನು ಮಾತನಾಡುತ್ತಿರಲ್ಲ, ಅರ್ಧ ಪಾಕಿಸ್ತಾನ ಎಂದರೆ ಏನು ಅರ್ಥ ಎಂದು ತರಾಟೆಗೆ ತೆಗೆದುಕೊಂಡಿದೆ.
ಸಚಿವರ ಪತ್ನಿ ಮುಸ್ಲಿಂ ಆಗಿದ್ದಾರೆ ಎಂದ ಮಾತ್ರಕ್ಕೆ ಆ ರೀತಿ ಹೇಳಿಕೆ ನೀಡುವುದು ಎಷ್ಟರಮಟ್ಟಿಗೆ ಸರಿ ಎಂದು ನ್ಯಾಯಪೀಠ ಪ್ರಶ್ನಿಸಿದೆ. ನಿರ್ದಿಷ್ಟ ಸಮುದಾಯವನ್ನು ಹಾಗೆಲ್ಲ ವ್ಯಾಖ್ಯಾನಿಸಬಾರದು ಎಂದು ಕಿಡಿಕಾರಿದೆ.
ದಿನೇಶ್ ಗುಂಡೂರಾವ್ ಪತ್ನಿ ತಬಸ್ಸುಮ್ ರಾವ್ ಹೂಡಿದ ಮಾನಹಾನಿ ಪ್ರಕರಣ ರದ್ದು ಮಾಡಬೇಕೆಂದು ಕೋರಿ ಯತ್ನಾಳ್ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕ ಸದಸ್ಯ ಪೀಠ ಇಂತಹ ಮಾತುಗಳನ್ನು ಆಡುವುದು ಸರಿಯಲ್ಲ, ಸ್ವಲ್ಪ ತಡೆ ಹಿಡಿದು ಮಾತನಾಡಿ ಎಂದು ಹೇಳುತ್ತಿದ್ದೇವೆ. ಅದನ್ನು ಪಾಲಿಸಬೇಕು ಎಂದು ಕಿವಿಮಾತು ಹೇಳಿದೆ.
ಯತ್ನಾಳ್ ಪರ ವಕೀಲರು, ದಿನೇಶ್ ಗುಂಡೂರಾವ್ ಹೇಳಿಕೆಗೆ ಪ್ರತಿ ಹೇಳಿಕೆ ನೀಡಲಾಗಿತ್ತು. ಮರುದಿನವೇ ಈ ಕುರಿತಾಗಿ ಸ್ಪಷ್ಟನೆಯನ್ನು ನೀಡಲಾಗಿದ್ದು, ಉದ್ದೇಶಪೂರ್ವಕವಾಗಿ ಆ ಹೇಳಿಕೆ ನೀಡಿಲ್ಲ. ಪ್ರಕರಣಕ್ಕೆ ತಡೆ ನೀಡಬೇಕು ಎಂದು ಮನವಿ ಮಾಡಿದರು. ಪ್ರಕರಣಕ್ಕೆ ತಡೆ ನೀಡಲು ಸಾಧ್ಯವಿಲ್ಲ ಎಂದ ನ್ಯಾಯಪೀಠ ವಿಚಾರಣೆ ಮುಂದೂಡಿದೆ.