ಬೆಂಗಳೂರು: ಕರ್ನಾಟಕ ಹೈಕೋರ್ಟ್ ಗೆ ಡಿಸೆಂಬರ್ 31ರವರೆಗೆ ಚಳಿಗಾಲದ ರಜೆ ಇರಲಿದೆ. ಹೊಸ ವರ್ಷದ ಮೊದಲ ದಿನ ಕೂಡ ರಜೆ ಇರಲಿದ್ದು, ಅಧಿಕೃತವಾಗಿ 2025ರ ಜನವರಿ 6ರಿಂದ ಹೈಕೋರ್ಟ್ ಕಲಾಪ ಪುನರಂಭವಾಗಲಿದೆ.
ಹೊಸ ವರ್ಷದ ಮೊದಲ ದಿನದ ಬಳಿಕ ಜನವರಿ 2ರಂದು ಗುರುವಾರ ಮತ್ತು ಜನವರಿ 3ರಂದು ಶುಕ್ರವಾರವು ರಜೆ ನೀಡಲಾಗಿದೆ. ನಂತರದಲ್ಲಿ ವಾರಾಂತ್ಯ ರಜೆ ಇರುವ ಹಿನ್ನೆಲೆ ಜನವರಿ 6ರಿಂದ ಹೈಕೋರ್ಟ್ ಕಲಾಪ ಪುನರಾರಂಭವಾಗಲಿದೆ. ಜನವರಿ 3 ಮತ್ತು 4ರ ಎರಡು ದಿನಗಳ ರಜೆಯನ್ನು ನಿಗದಿತ ಶನಿವಾರಗಳಂದು ಕಲಾಪ ನಡೆಸುವ ಮೂಲಕ ಹೊಂದಾಣಿಕೆ ಮಾಡಲು ತೀರ್ಮಾನಿಸಲಾಗಿದೆ.
ಚಳಿಗಾಲದ ರಜೆ ಅವಧಿಯಲ್ಲಿ ಡಿಸೆಂಬರ್ 24, 27 ಮತ್ತು 31 ರಂದು ಬೆಂಗಳೂರು, ಧಾರವಾಡ, ಕಲಬುರಗಿಯ ಮೂರು ಪೀಠಗಳಲ್ಲಿಯೂ ತುರ್ತು ಪ್ರಕರಣಗಳ ವಿಚಾರಣೆಯನ್ನು ರಜಾ ಕಾಲದ ನ್ಯಾಯಪೀಠಗಳು ನಡೆಸಲಿವೆ. ಒಂದು ವಿಭಾಗಿಯ ಪೀಠ ಮತ್ತು 2 ಏಕ ಸದಸ್ಯ ಪೀಠಗಳು ಮಾತ್ರ ರಜೆ ಅವಧಿಯಲ್ಲಿ ಕಾರ್ಯ ನಿರ್ವಹಿಸಲಿದ್ದು, ಈ ಅವಧಿಯಲ್ಲಿ ತುರ್ತು ಆದೇಶಗಳು, ತಡೆ ಆದೇಶಗಳು, ಮಧ್ಯಂತರ ನಿರ್ದೇಶನ ಸೇರಿ ಇತ್ಯಾದಿ ಪ್ರಕರಣಗಳ ವಿಚಾರಣೆಯನ್ನು ಮಾತ್ರ ರಜಾ ಕಾಲದ ನ್ಯಾಯಪೀಠಗಳು ನಡೆಸಲಿವೆ ಎಂದು ನ್ಯಾಯಾಂಗ ರಿಜಿಸ್ಟ್ರಾರ್ ತಿಳಿಸಿದ್ದಾರೆ.