ಬೆಂಗಳೂರು: ಶಾಲೆಗೆ ಐದು ದಿನ ಗೈರು ಹಾಜರಾದ ಕಾರಣಕ್ಕೆ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಖಾಸಗಿ ಶಾಲೆಯ ಅರೆಕಾಲಿಕ ಶಿಕ್ಷಕಿಯನ್ನು ಸೇವೆಯಿಂದ ಬಿಡುಗಡೆಗೊಳಿಸಿದ ಶೈಕ್ಷಣಿಕ ಮೇಲ್ಮನವಿ ನ್ಯಾಯಮಂಡಳಿಯ ಆದೇಶವನ್ನು ಹೈಕೋರ್ಟ್ ವಿಭಾಗಿಯ ಪೀಠ ಎತ್ತಿ ಹಿಡಿದು ಆದೇಶಿಸಿದೆ.
ಅಲ್ಪಾವಧಿಗೆ ಗೈರುಹಾಜರಾಗಿದ್ದಕ್ಕೆ ಸೇವೆಯಿಂದ ವಜಾ ಮಾಡಲಾಗಿದೆ. ಅದಕ್ಕೆ ಮೊದಲು ಯಾವುದೇ ವಿಚಾರಣೆ ನಡೆಸಿಲ್ಲ ಮತ್ತು ವಿವರಣೆ ನೀಡಲು ತಮಗೆ ಅವಕಾಶ ಕಲ್ಪಿಸಿಲ್ಲ ಎಂದು ಆಕ್ಷೇಪಿಸಿ ದಾವಣಗೆರೆ ತಾಲೂಕು ನಲ್ಕುಂದ ಗ್ರಾಮದ ಆರ್. ಸುಜಾತಮ್ಮ ಅವರು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ನೇತೃತ್ವದ ವಿಭಾಗೀಯ ನ್ಯಾಯ ಪೀಠ ಈ ಆದೇಶ ನೀಡಿದೆ.
ರಾಜಾಜಿನಗರದ ವಾಣಿ ವಿದ್ಯಾ ಕೇಂದ್ರದಲ್ಲಿ 2010ರಲ್ಲಿ ಕನ್ನಡ ಶಿಕ್ಷಕಿಯಾಗಿ ನೇಮಕವಾಗಿದ್ದ ಸುಜಾತಮ್ಮ ಅವರು 2013ರ ಫೆಬ್ರವರಿಯಲ್ಲಿ 5 ದಿನ ಕರ್ತವ್ಯಕ್ಕೆ ಗೈರು ಹಾಜರಾಗಿದ್ದರು. ತಮ್ಮ ಪುತ್ರಿಯ ಅನಾರೋಗ್ಯದ ಕಾರಣ ನೀಡಿ ದೀರ್ಘಕಾಲದ ರಜೆ ಪಡೆಯುತ್ತಿದ್ದರು. ಅವರ ಬೋಧನಾ ಮಟ್ಟ ಗಮನಾರ್ಹವಾಗಿರಲಿಲ್ಲ. ಐದು ದಿನ ರಜೆ ಹಾಕಿದ್ದಕ್ಕೆ ನೋಟಿಸ್ ನೀಡಿ ವಿವರಣೆ ಕೇಳಿದ್ದರೂ ಸೂಕ್ತ ವಿವರಣೆ ನೀಡಿಲ್ಲ ಎಂದು ಅಭಿಪ್ರಾಯಪಟ್ಟ ಶಿಕ್ಷಣ ಸಂಸ್ಥೆ ಅವರನ್ನು ಸೇವೆಯಿಂದ ಬಿಡುಗಡೆ ಮಾಡಿ 2013ರ ಜುಲೈ 22ರಂದು ಆದೇಶಿಸಿತ್ತು.
ಈ ಆದೇಶ ಪ್ರಶ್ನಿಸಿ ಸುಜಾತಮ್ಮ ಶೈಕ್ಷಣಿಕ ನ್ಯಾಯ ಮಂಡಳಿಗೆ ಅರ್ಜಿ ಸಲ್ಲಿಸಿದ್ದು, ನ್ಯಾಯ ಮಂಡಳಿ ಅವರ ಅರ್ಜಿಯನ್ನು ವಚಗೊಳಿಸಿದ್ದರಿಂದ ಹೈಕೋರ್ಟ್ ಮೊರೆ ಹೋಗಿದ್ದರು. ಸುಜಾತಮ್ಮ ಅವರನ್ನು ಸೇವೆಯಿಂದ ಬಿಡುಗಡೆ ಮಾಡಿದ ಕ್ರಮವನ್ನು ಹೈಕೋರ್ಟ್ ಏಕ ಸದಸ್ಯ ನ್ಯಾಯಪೀಠ ಎತ್ತಿ ಹಿಡಿದಿದ್ದು, ಇದರಿಂದ ಅವರು ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು.