ಬೆಂಗಳೂರು: ರಾಜ್ಯದ 17 ಖಾಸಗಿ ವೈದ್ಯಕೀಯ ಕಾಲೇಜುಗಳು ತಮ್ಮ ಮ್ಯಾನೇಜ್ಮೆಂಟ್ ಮತ್ತು ಎನ್.ಆರ್.ಐ. ಕೋಟಾದ 212 ಸೀಟುಗಳನ್ನು ಸರ್ಕಾರಿ ಕೋಟಾಕ್ಕೆ ಒಪ್ಪಿಸುವಂತೆ ಹೈಕೋರ್ಟ್ ಏಕ ಸದಸ್ಯ ಪೀಠದಿಂದ ನೀಡಿದ್ದ ಆದೇಶಕ್ಕೆ ವಿಭಾಗಿಯ ಪೀಠ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಬೆಂಗಳೂರಿನ ವೈದೇಹಿ ವೈದ್ಯಕೀಯ ವಿಜ್ಞಾನಗಳು ಮತ್ತು ಸಂಶೋಧನಾ ಸಂಸ್ಥೆ ಸೇರಿ ಅನೇಕ ಕಾಲೇಜುಗಳು ಸಲ್ಲಿಸಿದ ಮೇಲ್ಮನವಿ ಅರ್ಜಿ ವಿಚಾರಣೆ ಆಲಿಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ.ವಿ. ಅರವಿಂದ್ ಅವರಿದ್ದ ವಿಭಾಗೀಯ ಪೀಠದಿಂದ ಈ ಆದೇಶ ನೀಡಲಾಗಿದೆ.
ಈ ಮಧ್ಯಂತರ ಆದೇಶ ಅಂತಿಮ ತೀರ್ಪಿಗೆ ಒಳಪಡುತ್ತದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಏಕ ಸದಸ್ಯ ಪೀಠದ ಆದೇಶದಂತೆ ಖಾಸಗಿ ಕಾಲೇಜುಗಳು ನಾಲ್ಕು ವಾರದೊಳಗೆ ತಾವು ಎಷ್ಟು ಸೀಟುಗಳನ್ನು ಸರೆಂಡರ್ ಮಾಡುತ್ತವೋ ಅಷ್ಟು ಸೀಟುಗಳಿಗೆ ಖಾಸಗಿ ಕಾಲೇಜುಗಳಿಗೆ ಸರ್ಕಾರಿ ಕೋಟಾಕ್ಕೆ ನಿಗದಿಪಡಿಸಿರುವ ಶುಲ್ಕಕ್ಕೂ ಮತ್ತು ಮ್ಯಾನೇಜ್ಮೆಂಟ್, ಎನ್.ಆರ್.ಐ. ಕೋಟಾ ಶುಲ್ಕದ ನಡುವಿನ ವ್ಯತ್ಯಾಸದ ಮೊತ್ತವನ್ನು ಪಾವತಿಸಬೇಕು ಎಂದು ವಿಭಾಗಿಯ ಪೀಠ ಆದೇಶ ನೀಡಿದೆ.
ಒಂದು ವೇಳೆ ಖಾಸಿಗಿ ವೈದ್ಯಕೀಯ ಕಾಲೇಜುಗಳ ಮೇಲ್ಮನವಿ ವಜಾಗೊಂಡಲ್ಲಿ ಈ ವರ್ಷದ ಬದಲು ಮುಂದಿನ ಶೈಕ್ಷಣಿಕ ವರ್ಷ ವೈದ್ಯಕೀಯ ಸೀಟುಗಳನ್ನು ಸರ್ಕಾರಿ ಕೋಟಾಕ್ಕೆ ಬಿಟ್ಟು ಕೊಡಬೇಕಾಗುತ್ತದೆ ಎಂದು ಹೈಕೋರ್ಟ್ ವಿಭಾಗೀಯ ಪೀಠ ಷರತ್ತು ವಿಧಿಸಿದೆ.