ಬೆಂಗಳೂರು: ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕೋರ್ಟ್ ಮತ್ತು ಜಡ್ಜ್ ಗಳ ಬಗ್ಗೆ ಹಗುರವಾಗಿ ಮಾತನಾಡಿದ್ದ ಸ್ವಾಮೀಜಿಯೊಬ್ಬರಿಗೆ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ರಾಮಲಿಂಗೇಶ್ವರ ಮಠದ ಪೀಠಾಧಿಪತಿ ನೀಲಕಂಠ ಸಾರಂಗ ದೇಶಿಕೇಂದ್ರ ಸ್ವಾಮೀಜಿ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಹೈಕೋರ್ಟ್, ನಿಮ್ಮಂತಹ ಶ್ರೇಷ್ಠ ಸ್ಥಾನದಲ್ಲಿರುವ ಸ್ವಾಮೀಜಿಗಳೇ ನ್ಯಾಯಾಧೀಶರು, ನ್ಯಾಯಾಲಯದ ಬಗ್ಗೆ ಹಗುರವಾಗಿ ಮಾತನಾಡಿದ್ದೀರಿ. ನೀವು ಗೌರವ ಬರುವ ರೀತಿಯಲ್ಲಿ ನಡೆದುಕೊಳ್ಳಬೇಕು. ಇಲ್ಲವಾದರೆ ನಮ್ಮ ಕೆಲಸ ನಾವು ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ, ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿ, ತ್ರಿಕಾಲ ಜ್ಞಾನಿ ಸ್ವಾಮೀಜಿಗಳೇ ಹೀಗಾದರೆ ಹೇಗೆ ಎಂದು ಅತೃಪ್ತಿ ವ್ಯಕ್ತಪಡಿಸಿದೆ.
ಸಾಮಾನ್ಯ ಮನುಷ್ಯ ನ್ಯಾಯಾಲಯದ ಬಗ್ಗೆ ಹಗುರವಾಗಿ ಮಾತನಾಡಿದ್ದರೆ ನಾವು ಅರ್ಥಮಾಡಿಕೊಳ್ಳುತ್ತಿದ್ದೆವು. ನೀವು ಶ್ರೇಷ್ಠ ಸ್ಥಾನದಲ್ಲಿರುವ ಸ್ವಾಮೀಜಿ. ನೀವು ಈ ರೀತಿ ಮಾತನಾಡಿದರೇ ಹೇಗೆ? ಎಂದು ಪ್ರಶ್ನಿಸಿದೆ. ಅಂತಿಮವಾಗಿ ಸ್ವಾಮೀಜಿ ಕ್ಷಮೆ ಕೋರಿದ ಹಿನ್ನೆಲೆಯಲ್ಲಿ ಅವರ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಕೈಬಿಟ್ಟ ಹೈಕೋರ್ಟ್ ಅರ್ಜಿಯನ್ನು ಇತ್ಯರ್ಥಪಡಿಸಿ ಆದೇಶಿಸಿದೆ.