ಬೆಂಗಳೂರು: ವೃದ್ಧ ಪೋಷಕರ ಆರೈಕೆ ಮಕ್ಕಳ ಜವಾಬ್ದಾರಿ ಎಂದು ಹೈಕೋರ್ಟ್ ಹೇಳಿದೆ. ಮಗಳಿಗೆ ತಂದೆ ಬರೆದಿದ್ದ ಗಿಫ್ಟ್ ಡೀಡ್ ರದ್ದುಪಡಿಸಿದ್ದು, ಆಸ್ತಿ ಬರೆಸಿಕೊಂಡ ಬಳಿಕ ಪೋಷಕರನ್ನು ಹೊರಹಾಕಿದ್ದ ಪುತ್ತಿಗೆ ಶಾಕ್ ನೀಡಿದೆ.
ತಂದೆಯಿಂದ ಆಸ್ತಿಯನ್ನು ಉಡುಗೊರೆಯಾಗಿ ಪಡೆದುಕೊಂಡ ನಂತರ ಹಲ್ಲೆ ನಡೆಸಿ ಮನೆಯಿಂದ ಹೊರ ಹಾಕಿದ್ದ ಪುತ್ರಿ ಮತ್ತು ಅಳಿಯನ ಕೃತ್ಯವನ್ನು ಗಮನಿಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ ಪೋಷಕರನ್ನು ಆರೈಕೆ ಮಾಡುವ ಜವಾಬ್ದಾರಿ ಕಾನೂನು, ಧರ್ಮ ಮತ್ತು ನೈತಿಕತೆ ಮಕ್ಕಳ ಮೇಲೆ ಇರುತ್ತದೆ. ಪೋಷಕರ ಆಸ್ತಿಯನ್ನು ಉಡುಗೊರೆಯಾಗಿ ಮಕ್ಕಳು ಪಡೆದಾಗ ಈ ಜವಾಬ್ದಾರಿ ಹೆಚ್ಚಿರುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.
ತಂದೆಯಿಂದ ಆಸ್ತಿಯನ್ನು ಉಡುಗೊರೆಯಾಗಿ ಪಡೆದಿರುವುದನ್ನು ಅಮಾನ್ಯಗೊಳಿಸಿದ್ದ ತುಮಕೂರು ವಲಯದ ಪೋಷಕರ ಕಲ್ಯಾಣ ಮತ್ತು ಹಿರಿಯ ನಾಗರಿಕನ ನಿರ್ವಹಣಾ ಕಾಯ್ದೆಯಡಿ ನಾಯಾಧೀಕರಣದ ಉಪ ವಿಭಾಗಾಧಿಕಾರಿ ಆದೇಶ ಮತ್ತು ಅದನ್ನು ಎತ್ತಿ ಹಿಡಿದಿದ್ದ ಹೈಕೋರ್ಟ್ ಏಕ ಸದಸ್ಯ ಪೀಠದ ತೀರ್ಪನ್ನು ವಿಭಾಗಿಯ ಪೀಠ ಪುರಸ್ಕರಿಸಿದೆ.
ವಯಸ್ಸಾಗಿರುವ ತಂದೆ ತಾಯಿಯನ್ನು ನೋಡಿಕೊಳ್ಳುವುದು ಮಕ್ಕಳ ಹೊಣೆಗಾರಿಕೆಯಾಗಿದೆ. ಇದು ದಯೆ, ದಾನದ ವಿಚಾರವಲ್ಲ, ಮಕ್ಕಳ ಶಾಸನಬದ್ಧ ಜವಾಬ್ದಾರಿ ಎಂಬುದನ್ನು ಸಹಸ್ರಾರು ವರ್ಷಗಳಿಂದ ದೇಶದ ಧರ್ಮ ಗ್ರಂಥಗಳು ಸಾರುತ್ತವೆ ಎಂದು ಹೈಕೋರ್ಟ್ ಹೇಳಿದೆ.
ತಂದೆ ತಾಯಿಯನ್ನು ಮಕ್ಕಳು ನೋಡಿಕೊಳ್ಳುವುದೇ ಧರ್ಮ ಎಂದು ಉಲ್ಲೇಖಿಸಿದೆ. ಪ್ರಕರಣದಲ್ಲಿ ತಂದೆಯಿಂದ ಆಸ್ತಿಯನ್ನು ಉಡುಗೊರೆಯಾಗಿ ಪಡೆದಿದ್ದ ಪುತ್ರಿ ಅವರನ್ನು ಆರೈಕೆ ಮಾಡಿಲ್ಲ. ಹಲ್ಲೆ ನಡೆಸಿ ಮನೆಯಿಂದ ಹೊರ ಹಾಕಿದ್ದಾರೆ ಇದು ನೋವಿನ ಸಂಗತಿಯಾಗಿದೆ ಎಂದು ಹೇಳಿದೆ.
ತುಮಕೂರಿನ ಗುಬ್ಬಿ ತಾಲೂಕಿನ ಬಸವಪಟ್ಟಣದ ಮಹಿಳೆಗೆ ಅವರ ತಂದೆ ತಮ್ಮ ಆಸ್ತಿಯನ್ನು ಉಡುಗೊರೆಯಾಗಿ ನೀಡಿದ್ದರು. ಆಸ್ತಿ ಮಾರಾಟ ವಿಚಾರಕ್ಕೆ ತಂದೆ, ತಾಯಿಯನ್ನು ಮನೆಯಿಂದ ಹೊರ ಹಾಕಿದ್ದರು. ಉಪವಿಭಾಗಾಧಿಕಾರಿ ಉಡುಗೊರೆ ಕ್ರಯ ಅಮಾನ್ಯ ಮಾಡಿದ್ದರು. ಪುತ್ರಿ ಹೈಕೋರ್ಟ್ ಗೆ ತಕರಾರು ಅರ್ಜಿ ಸಲ್ಲಿಸಿದ್ದು, ಏಕಸದಸ್ಯ ಪೀಠ ಅದನ್ನು ವಜಾಗೊಳಿಸಿತ್ತು. ಇದನ್ನು ವಿಭಾಗೀಯ ಪೀಠದಲ್ಲಿ ಪುತ್ರಿ ಪ್ರಶ್ನಿಸಿದ್ದರು.