ಬೆಂಗಳೂರು: ಮಧುಮೇಹ ಇರುವ ಕಾರಣಕ್ಕೆ ಜೀವನಾಂಶ ಕೊಡಲು ಆಗುವುದಿಲ್ಲ ಎನ್ನುವ ಪತಿಯ ವಾದ ತಿರಸ್ಕರಿಸಿದ ಹೈಕೋರ್ಟ್ ಪತ್ನಿ, ಮಕ್ಕಳಿಗೆ ಜೀವನಾಂಶ ಕೊಡುವಂತೆ ಮಹತ್ವದ ಆದೇಶ ನೀಡಿದೆ.
ಕೌಟುಂಬಿಕ ನ್ಯಾಯಾಲಯದ ನಿರ್ದೇಶನದಂತೆ ಮಾಸಿಕ 10,000 ರೂ. ಜೀವನಾಂಶ ನೀಡಲು ಆಗುವುದಿಲ್ಲ ಎಂದು ವ್ಯಕ್ತಿಯೊಬ್ಬರು ಸಲ್ಲಿಸಿದ ವಾದವನ್ನು ಹೈಕೋರ್ಟ್ ತಿರಸ್ಕರಿಸಿದೆ. ಮಧುಮೇಹ ನಿರ್ವಹಣೆ ಮಾಡುವಂತಹ ಕಾಯಿಲೆಯಾಗಿದ್ದು, ಪತ್ನಿ ಮಕ್ಕಳಿಗೆ ಜೀವನಾಂಶ ನೀಡಬೇಕು ಎಂದು ತಿಳಿಸಿದೆ.
ಬೆಂಗಳೂರಿನ 38 ವರ್ಷದ ವ್ಯಕ್ತಿ ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ಪೀಠ ವಜಾಗೊಳಿಸಿದೆ. ವೈದ್ಯಕೀಯ ವಿಜ್ಞಾನ ಸಾಕಷ್ಟು ಮುಂದುವರೆದಿದ್ದು, ವೈದ್ಯಕೀಯ ಆರೈಕೆಯಿಂದ ಮಧುಮೇಹ ನಿರ್ವಹಣೆ ಮಾಡಬಹುದಾಗಿದೆ. ಮಧುಮೇಹ ಇದೆ ಎಂಬ ಕಾರಣಕ್ಕೆ ಜೀವನಾಂಶ ಪಾವತಿಯಿಂದ ತಪ್ಪಿಸಿಕೊಳ್ಳಲಾಗದು. ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಪಾಲಿಸಬೇಕು ಎಂದು ಹೈಕೋರ್ಟ್ ನ್ಯಾಯಪೀಠ ಸೂಚಿಸಿದೆ.
ಕೌಟುಂಬಿಕ ಕಲಹದ ಕಾರಣಕ್ಕೆ ಅರ್ಜಿದಾರರಿಂದ ದೂರವಾಗಿರುವ ಪತ್ನಿ, ಮಗನೊಂದಿಗೆ ಪ್ರತ್ಯೇಕ ವಾಸದಲ್ಲಿದ್ದು, ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ತನಗೂ ಮತ್ತು ಅಪ್ರಾಪ್ತ ಮಗನಿಗೆ ಜೀವನಾಂಶ ನೀಡಲು ಪತಿಗೆ ನಿರ್ದೇಶನ ನೀಡುವಂತೆ ಕೋರಿ ಮಧ್ಯಂತರ ಅರ್ಜಿ ಸಲ್ಲಿಸಿದ್ದು, ಕೌಟುಂಬಿಕ ನ್ಯಾಯಾಲಯ ಮಹಿಳೆಯ ಅರ್ಜಿಯನ್ನು ಪುರಸ್ಕರಿಸಿ ಪತ್ನಿ, ಮಗನಿಗೆ ಮಾಸಿಕ 10 ಸಾವಿರ ರೂ. ಜೀವನಾಂಶ ನೀಡಲು ಏಪ್ರಿಲ್ 21ರಂದು ನಿರ್ದೇಶಿಸಿತ್ತು.
ಈ ಆದೇಶ ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದು, ಮಧುಮೇಹದಿಂದ ಬಳಲುತ್ತಿರುವ ಕಾರಣ ಜೀವನಾಂಶ ನೀಡಲು ಆಗುತ್ತಿಲ್ಲ. ಪತ್ನಿ ಉದ್ಯೋಗದಲ್ಲಿರುವುದರಿಂದ ಆಕೆಗೆ ಜೀವನಾಂಶ ಅಗತ್ಯವಿಲ್ಲ. ಉತ್ತಮ ಜೀವನ ನಡೆಸುತ್ತಿದ್ದಾರೆ. ಹೀಗಾಗಿ ಕೌಟುಂಬಿಕ ನ್ಯಾಯಾಲಯ ಆದೇಶ ರದ್ದುಪಡಿಸಬೇಕು ಎಂದು ಕೋರಿದ್ದರು. ಈ ವಾದವನ್ನು ಒಪ್ಪದ ನ್ಯಾಯಪೀಠ ತನ್ನನ್ನು ಅವಲಂಬಿಸಿದ ಕುಟುಂಬವನ್ನು ನೋಡಿಕೊಳ್ಳುವುದು ಅವಶ್ಯವಾಗಿದ್ದು ದೈಹಿಕವಾಗಿ ದುಡಿಯುವ ಸಾಮರ್ಥ್ಯವಿದ್ದರೆ ಆತ ಪತ್ನಿ, ಮಕ್ಕಳ ಜೀವನಕ್ಕೆ ಜೀವನಾಂಶ ಪಾವತಿಸಬೇಕು ಎಂದು ಆದೇಶ ನೀಡಿದೆ.