ಬೆಂಗಳೂರು: ಅತ್ಯಾಚಾರ ಎಸೆಗಿದ್ದವನನ್ನೇ ಮದುವೆಯಾಗಲು ಯುವತಿ ನಿರ್ಧರಿಸಿದ್ದು, ಅಪರಾಧಿಯ ಶಿಕ್ಷೆಯನ್ನು ಅಮಾನತುಗೊಳಿಸಿ ಹೈಕೋರ್ಟ್ ಷರತ್ತು ಬದ್ಧ ಜಾಮೀನು ನೀಡಿದೆ.
2017ರಲ್ಲಿ ಪ್ರಕರಣ ನಡೆದಾಗ 17 ವರ್ಷವಾಗಿದ್ದ ಯುವತಿಗೆ ಈಗ 24 ವರ್ಷ. ಆಕೆಯ ಅಪಹರಿಸಿ ಅತ್ಯಾಚಾರ ಎಸಗಿದ ಆರೋಪದ ಮೇಲೆ ಅಪರಾಧಿಗೆ 2019ರ ಮಾರ್ಚ್ 22ರಂದು ದೋಷಿ ಎಂದು ತೀರ್ಮಾನಿಸಿ ಸೆಷನ್ಸ್ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಆರೋಪಿ ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿ ಹೈಕೋರ್ಟ್ ನಲ್ಲಿ ವಿಚಾರಣೆಗೆ ಬಾಕಿ ಇದ್ದು, ಇದೇ ಅರ್ಜಿಗೆ ಮಧ್ಯಂತರ ಅರ್ಜಿ ಸಲ್ಲಿಸಿದ್ದ ಆತ ಸಂತ್ರಸ್ತೆ ಮದುವೆಯಾಗಲು ಸಿದ್ದನಿದ್ದು, ಜೀವಾವಧಿ ಶಿಕ್ಷೆ ಅಮಾನತ್ತಿನಲ್ಲಿಟ್ಟು ಜಾಮೀನು ಮಂಜೂರು ಮಾಡಬೇಕೆಂದು ಮನವಿ ಮಾಡಿದ್ದ.
ಸಂತ್ರಸ್ತೆ ಕೂಡ ಹೈಕೋರ್ಟ್ ಗೆ ಪ್ರಮಾಣ ಪತ್ರ ಸಲ್ಲಿಸಿ ಆರೋಪಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುವಂತೆ ಕೋರಿದ್ದಳು. ನ್ಯಾಯಮೂರ್ತಿ ಬಿ. ವೀರಪ್ಪ, ಹಾಗೂ ನ್ಯಾ.ಟಿ. ವೆಂಕಟೇಶ್ ನಾಯಕ್ ಅವರಿದ್ದ ಪೀಠ ಆರೋಪಿ ತನ್ನ ಪ್ರಿಯಕರನೆಂದು ಸಂತ್ರಸ್ತೆಯೇ ಒಪ್ಪಿಕೊಂಡಿದ್ದಾಳೆ. ಆಕೆಯನ್ನು ವಿವಾಹವಾಗದಿದ್ದರೆ ಘನತೆ ಮತ್ತು ಗೌರವಕ್ಕೆ ಧಕ್ಕೆಯಾಗುತ್ತದೆ ಎಂದು ತಿಳಿಸಿದ್ದಾಳೆ. ಈ ಅಂಶಗಳನ್ನು ಪರಿಗಣಿಸಿ ವಿಚಾರಣಾ ನ್ಯಾಯಾಲಯ ವಿಧಿಸಿದ ಅಮಾನತ್ತಿನಲ್ಲಿ ಇಟ್ಟು ಒಂದು ಲಕ್ಷ ರೂ. ಬಾಂಡ್ ಮತ್ತು ಅಷ್ಟೇ ಮೊತ್ತಕ್ಕೆ ಒಬ್ಬರ ಶೂರಿಟಿ ಒದಗಿಸಿ ಜಾಮೀನು ನೀಡಲಾಗಿದೆ.
ಅಪರಾಧಿ ಮತ್ತು ಅವನ ಪಾಲಕರು ಸಂತ್ರಸ್ತೆಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಸರಿಯಾಗಿ ನೋಡಿಕೊಳ್ಳದಿದ್ದರೆ ಜಾಮೀನು ರದ್ಧತಿಗೆ ಕೋರಿ ಸಂತ್ರಸ್ತೆ ಅಥವಾ ಅವಳ ಪರವಾಗಿ ಪೋಲೀಸರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬಹುದು ಎಂದು ಹೇಳಲಾಗಿದೆ. ಈ ಆದೇಶ ಮಧ್ಯಂತರ ಕ್ರಮವಾಗಿದ್ದು ಭವಿಷ್ಯದಲ್ಲಿ ಇಂತಹ ಪ್ರಕರಣಗಳಿಗೆ ನಿದರ್ಶನವೆಂದು ಪರಿಗಣಿಸಲಾಗುವುದಿಲ್ಲವೆಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಘಟನೆ ನಡೆದಾಗ ನಾವು ಪ್ರೀತಿಸುತ್ತಿದ್ದೆವು. ಒತ್ತಡ ಹಾಗೂ ಭಯದಿಂದ ಆರೋಪಿ ವಿರುದ್ಧ ಹೇಳಿಕೆ ನೀಡಿದ್ದೆ. ಈಗ ಆತನನ್ನು ಮದುವೆಯಾಗಲು ನಿರ್ಧರಿಸಿದ್ದೇನೆ. ಆತ ಕೂಡ ಮದುವೆಯಾಗುವುದಾಗಿ ಒಪ್ಪಿಕೊಂಡಿದ್ದಾನೆ. ಇಬ್ಬರೂ ರಾಜಿಯಾಗಲು ತೀರ್ಮಾನಿಸಿದ್ದು, ನಮ್ಮ ತಂದೆ ತಾಯಿಗಳಿಗೆ ಮೂವರು ಪುತ್ರಿಯರಿದ್ದು ನಾನೇ ಹಿರಿಯ ಮಗಳಾಗಿದ್ದೇನೆ. ತಂದೆ ಕಾಯಿಲೆಯಿಂದ ಬಳಲುತ್ತಿದ್ದು, ಮದುವೆಯಾಗದೆ ಉಳಿದರೆ ಊರಿನಲ್ಲಿ ಜೀವನ ನಡೆಸುವುದು ಕಷ್ಟವಾಗುತ್ತದೆ. ಊರಿನ ಜನರ ಮುಂದೆ ಘನತೆಯಿಂದ ಬದುಕಬೇಕು. ಹಾಗಾಗಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಅತ್ಯಾಚಾರ ಎಸಗಿದ್ದ ವ್ಯಕ್ತಿಗೆ ಜಾಮೀನು ಕೊಡಬೇಕೆಂದು ಸಂತ್ರಸ್ತೆ ಮನವಿ ಮಾಡಿದ್ದಳು. ಆರೋಪಿಯ ಪೋಷಕರು ಕೂಡ ನ್ಯಾಯಾಲಯಕ್ಕೆ ಹಾಜರಾಗಿ ಮದುವೆಗೆ ಯಾವುದೇ ಆಕ್ಷೇಪಣೆ ಇಲ್ಲವೆಂದು ತಿಳಿಸಿ ಒಂದು ಎಕರೆ ಜಮೀನನ್ನು ಸಂತ್ರಸ್ತೆ ಹೆಸರಿಗೆ ನೋಂದಣಿ ಮಾಡಿಕೊಡುವುದಾಗಿ ಹೇಳಿದ್ದಾರೆ.