ಬೆಂಗಳೂರು: ದಂಪತಿಯ ಒಂದು ಫೋಟೋ ಆಧಾರವಾಗಿಟ್ಟುಕೊಂಡು ಅವರು ಅನ್ಯೋನ್ಯವಾಗಿದ್ದಾರೆಂದು ನಿರ್ಧರಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ದಂಪತಿ ಮದುವೆ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ಸಂತೋಷದಿಂದ ಫೋಟೋಗೆ ಪೋಸ್ ನೀಡಿದ್ದಾರೆ. ಅದರ ಆಧಾರದ ಮೇಲೆ ದಂಪತಿ ನಡುವೆ ಎಲ್ಲವೂ ಸರಿಯಾಗಿದೆ ಎಂದು ಅರ್ಥವಲ್ಲ, ಅದೇ ಆಧಾರದಲ್ಲಿ ಇಬ್ಬರ ನಡುವಿನ ಸಂಬಂಧದ ಕುರಿತು ಸ್ಪಷ್ಟ ಚಿತ್ರಣ ನೀಡಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ನ್ಯಾಯಮೂರ್ತಿ ಅನುಸಿವರಾಮನ್ ಮತ್ತು ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಅವರಿದ್ದ ವಿಭಾಗೀಯ ಪೀಠ ಹೇಳಿದ್ದು, ವಿಚ್ಛೇದನ ಮಂಜೂರು ಮಾಡಿದೆ.
ವಿಚ್ಛೇದನ ಅರ್ಜಿ ವಜಾಗೊಳಿಸಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ತುಮಕೂರಿನ ಮಹಿಳೆ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ, ವಿಚ್ಚೇದನ ನೀಡಿದೆ. ಪತ್ನಿಗೆ ಅಕ್ರಮ ಸಂಬಂಧವಿದೆ ಎಂದು ಪತಿ ಆರೋಪಿಸಿದ್ದಾರೆ. ಅವರು ಸಾಕ್ಷ್ಯಾಧಾರಗಳನ್ನು ಒದಗಿಸಲು ವಿಫಲರಾಗಿದ್ದಾರೆ. ಆದ್ದರಿಂದ ಈ ರೀತಿ ಆರೋಪಿಸುವುದು ಕ್ರೌರ್ಯಕ್ಕೆ ಸಮ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಪತಿ ಪರ ವಾದ ಮಂಡಿಸಿದ ವಕೀಲರು, ಪತ್ನಿ ಸ್ನಾತಕೋತ್ತರ ಪದವಿ ಪಡೆದ ನಂತರ ಅಹಂನಿಂದ ವರ್ತಿಸುತ್ತಿದ್ದರು. ಆಕೆಯ ಪೋಷಕರೊಂದಿಗೆ ನೆಲೆಸುವಂತೆ ಗಂಡನನ್ನು ಒತ್ತಾಯಿಸಿದ್ದಾರೆ. ಆದರೆ, ಪತಿ ಇದಕ್ಕೆ ಒಪ್ಪಿರಲಿಲ್ಲ. 2008ರಿಂದ ಪರಿಚಯವಿದ್ದ ಅರ್ಜಿದಾರ ಪತ್ನಿ ಮತ್ತು ಪ್ರತಿವಾದಿ ಪತಿ 2012ರಲ್ಲಿ ಮದುವೆಯಾಗಿದ್ದರು. ಬಳಿಕ ಪತ್ನಿ ಇಂಜಿನಿಯರಿಂಗ್ ನಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದು, ನಂತರ ಎರಡು ವರ್ಷಗಳ ಕಾಲ ಜೊತೆಗಿದ್ದರು. ಪತಿ ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಕೌಟುಂಬಿಕ ನ್ಯಾಯಾಲಯ ಅರ್ಜಿ ವಜಾಗೊಳಿಸಿದ್ದ ಹಿನ್ನಲೆಯಲ್ಲಿ ಆದೇಶ ಪ್ರಶ್ನಿಸಿ ಪತ್ನಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.