
ಬೆಂಗಳೂರು: ಸ್ವಾತಂತ್ರ್ಯ ಹೋರಾಟಗಾರರ ಹೆಸರಲ್ಲಿ ಸರ್ಕಾರದಿಂದ ಗೌರವಧನ ಪಡೆಯಲು ಯತ್ನಿಸಿದವರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಹೈಕೋರ್ಟ್ ಆದೇಶಿಸಿದೆ.
ಸ್ವಾತಂತ್ರ್ಯ ಹೋರಾಟಗಾರ ಎಂದು ಹಲವು ವರ್ಷ ಗೌರವಧನ ಪಡೆದ ಮುಳಬಾಗಿಲು ತಾಲೂಕಿನ ಮಂಡಿಕಲ್ ಗ್ರಾಮದ 85 ವರ್ಷದ ಎಂ.ವಿ. ಶ್ರೀನಿವಾಸಗೌಡ ಅವರಿಂದ ಪುನಃ ಹಣ ವಸೂಲು ಮಾಡಲು ಕೋಲಾರ ಜಿಲ್ಲಾಧಿಕಾರಿ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಜಿ. ಪಂಡಿತ್ ಮತ್ತು ನ್ಯಾಯಮೂರ್ತಿ ರಾಮಚಂದ್ರ ಡಿ. ಹುದ್ದಾರ್ ಅವರಿದ್ದ ವಿಭಾಗೀಯ ಪೀಠದಿಂದ ಈ ಆದೇಶ ನೀಡಲಾಗಿದೆ.
ಅರ್ಜಿಯನ್ನು ವಜಾಗೊಳಿಸಿದ ನ್ಯಾಯಾಲಯ ಕರ್ನಾಟಕ ರಾಜ್ಯ ಸ್ವಾತಂತ್ರ್ಯ ಹೋರಾಟಗಾರರ ಕಲ್ಯಾಣ ನಿಯಮ 1969ರ ಉದ್ದೇಶ ನಿಜವಾದ ಸ್ವಾತಂತ್ರ್ಯ ಹೋರಾಟಗಾರರಿಗೆ ಪಿಂಚಣಿ ರೂಪದಲ್ಲಿ ಗೌರವಧನ ದೊರಕಿಸಿ ಕೊಡುವುದಾಗಿದೆ. ಅದಕ್ಕೆ ಅರ್ಜಿ ಸಲ್ಲಿಸುವವರು ಸೂಕ್ತ ದಾಖಲೆ ನೀಡಬೇಕಿದೆ ಎಂದು ಹೇಳಿದೆ.
ಅರ್ಹ ಸ್ವಾತಂತ್ರ್ಯ ಹೋರಾಟಗಾರರಿಗೆ ಯಾವುದೇ ತೊಂದರೆ ಆಗಬಾರದು. ಅವರ ಅರ್ಜಿಗಳನ್ನು ಸ್ವೀಕರಿಸಿ ಸಕಾಲದಲ್ಲಿ ಗೌರವಧನ ನೀಡಬೇಕೆಂದು ಎಲ್ಲಾ ಕ್ರಮಗಳನ್ನು ಸರ್ಕಾರ ಕೈಗೊಂಡಿದೆ. ಆದರೆ ಕೆಲವು ವ್ಯಕ್ತಿಗಳು ನಕಲಿ ದಾಖಲೆ ಒದಗಿಸಿ ಗೌರವಧನಕ್ಕೆ ಹಕ್ಕು ಮಂಡಿಸುತ್ತಾರೆ. ಅಂತಹವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಹೈಕೋರ್ಟ್ ಹೇಳಿದೆ.