ಧಾರವಾಡ: ಹೊರಗುತ್ತಿಗೆ ಮಹಿಳಾ ನೌಕರರ ರಜೆ ವಿಷಯದಲ್ಲಿ ಧಾರವಾಡದ ಹೈಕೋರ್ಟ್ ಏಕ ಸದಸ್ಯ ಪೀಠದಿಂದ ಮಹತ್ವದ ತೀರ್ಪು ನೀಡಲಾಗಿದೆ.
ಸರ್ಕಾರದ ವಿವಿಧ ಇಲಾಖೆಗಳಲ್ಲಿ ಹೊರಗುತ್ತಿಗೆಯಲ್ಲಿ ಕಾರ್ಯನಿರ್ವಹಿಸುವ ಮಹಿಳೆಯರಿಗೂ ಮಾತೃತ್ವ ರಜೆ ನೀಡಬೇಕು. ಈ ರಜೆಯ ನಂತರ ಅವರು ಮತ್ತೆ ಸೇವೆಯಲ್ಲಿ ಮುಂದುವರೆಯಲು ಬಯಸಿದರೆ ಅವಕಾಶ ನೀಡಬೇಕು ಎಂದು ಹೇಳಲಾಗಿದೆ.
ವಿಜಯನಗರ ಜಿಲ್ಲೆ ಹೂವಿನಹಡಗಲಿಯ ಚಾಂದ್ ಬೀ ಬಳೆಗಾರ ಅವರು 2014ರಲ್ಲಿ ಹೂವಿನಹಡಗಲಿಯಲ್ಲಿ ರೈತ ಸಂಪರ್ಕ ಕೇಂದ್ರದ ಅಕೌಂಟೆಂಟ್ ಆಗಿ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸಿದ್ದರು. ಮಾತೃತ್ವ ರಜೆ ಮುಗಿಸಿ ಕೆಲಸಕ್ಕೆ ಬಂದಾಗ ಅವರ ಸ್ಥಾನಕ್ಕೆ ಬೇರೊಬ್ಬರನ್ನು ಇಲಾಖೆ ನಿಯೋಜಿಸಿತ್ತು. ಹೀಗಾಗಿ ಅವರು ಕೋರ್ಟ್ ಮೆಟ್ಟಿಲೇರಿದ್ದರು. ಮಾತೃತ್ವ ರಜೆ ಮುಗಿಸಿ ಬಂದ ನಂತರವೂ ಸೇವೆಗೆ ಮರಳಲು ಗುತ್ತಿಗೆ ಮಹಿಳಾ ನೌಕರರಿಗೆ ಅವಕಾಶ ಕಲ್ಪಿಸಬೇಕು ಎಂದು ಹೈಕೋರ್ಟ್ ಏಕ ಸದಸ್ಯ ಪೀಠ ತಿಳಿಸಿದೆ.