ಬೆಂಗಳೂರು: ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ನಿವೃತ್ತ ನೌಕರರಿಗೆ ಗಳಿಕೆ ರಜೆ ನಗದೀಕರಣದ ಮೇಲೆ ವಾರ್ಷಿಕ ಶೇಕಡ 8ರಷ್ಟು ಬಡ್ಡಿಯನ್ನು ಮೂರು ತಿಂಗಳಲ್ಲಿ ಪಾವತಿಸಲು ಹೈಕೋರ್ಟ್ ನಿರ್ದೇಶನ ನೀಡಿದೆ.
ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ನಿವೃತ್ತ ನೌಕರರ ಸಂಘದ ಜಂಟಿ ಕಾರ್ಯದರ್ಶಿ ಬಿ.ಎಸ್. ಗುರುಸ್ವಾಮಿ ಇತರೆ 20 ನಿವೃತ್ತ ನೌಕರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್. ನಟರಾಜ್ ಅವರ ಪೀಠದಿಂದ ಈ ನಿರ್ದೇಶನ ನೀಡಲಾಗಿದೆ.
ವಿಚಾರಣೆಯ ಸಂದರ್ಭದಲ್ಲಿ ಕೈಮಗ್ಗ ಅಭಿವೃದ್ಧಿ ನಿಗಮದ ಪರ ವಕೀಲರು, ಗಳಿಕೆ ರಜೆ ನಗದೀಕರಣ ವಿಳಂಬವಾಗಿದ್ದು, ಅದರ ಮೇಲೆ ಬಡ್ಡಿ ಪಾವತಿಗೆ ನಿಗಮದ ಸಮ್ಮತಿ ಇದೆ ಎಂದು ತಿಳಿಸಿದ್ದಾರೆ. ಹೇಳಿಕೆ ದಾಖಲಿಸಿಕೊಂಡ ನ್ಯಾಯಪೀಠ ನಿಗಮದ ನಿವೃತ್ತ ನೌಕರರಿಗೆ ಅವರ ರಜೆ ನಗದೀಕರಣ ಬಿಡುಗಡೆ ಮಾಡಲು ವಿಳಂಬವಾಗಿರುವುದಕ್ಕೆ ವಾರ್ಷಿಕ ಶೇಕಡ 8ರಂತೆ ಪಟ್ಟಿ ಪಾವತಿಸಲು ಆದೇಶ ನೀಡಿ ಅರ್ಜಿಯನ್ನು ಇತ್ಯರ್ಥಪಡಿಸಿದೆ.
2014 ರಿಂದ 2023ರ ಅವಧಿಯಲ್ಲಿ ಅರ್ಜಿದಾರರು ನಿವೃತ್ತರಾಗಿದ್ದು, ನಿಯಮದಂತೆ ನಿವೃತ್ತಿಯಾದ 30 ದಿನಗಳಲ್ಲಿ ಪಿಂಚಣಿ, ಗ್ರಾಚುಟಿ, ರಜೆ ನಗದೀಕರಣ ಇತರೆ ನಿವೃತ್ತಿ ಭತ್ಯೆಗಳನ್ನು ಬಿಡುಗಡೆ ಮಾಡಬೇಕಿದೆ. ಆದರೆ ನಿಗಮದ ನಿವೃತ್ತ ನೌಕರರ ರಜೆ ನಗದೀಕರಣ ಬಿಡುಗಡೆ ಮಾಡಲು 7ರಿಂದ 52 ತಿಂಗಳವರೆಗೆ ವಿಳಂಬವಾಗಿದೆ.