ಬೆಂಗಳೂರು: ಪತ್ನಿ ಬೇರೆ ಧರ್ಮಕ್ಕೆ ಮತಾಂತರಗೊಂಡರೆ ದಂಪತಿ ವಿವಾಹ ವಿಚ್ಛೇದನ ಪಡೆದುಕೊಳ್ಳದಿದ್ದರೂ ಮದುವೆ ಅನೂರ್ಜಿತವಾಗುತ್ತದೆ ಎಂದು ಹೈಕೋರ್ಟ್ ಆದೇಶ ನೀಡಿದೆ.
ಪತ್ನಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡ ನಂತರ ವತಿಯಿಂದ ಎಲ್ಲಾ ಹಕ್ಕುಗಳನ್ನು ಕಳೆದುಕೊಂಡಂತೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ ಸೆಕ್ಷನ್ 22ರ ಪ್ರಕಾರ ಪತ್ನಿಗೆ ಪರಿಹಾರ ನೀಡುವಂತೆ ಸೆಷನ್ಸ್ ಕೋರ್ಟ್ ನೀಡಿದ್ದ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದೆ.
ಕೌಟುಂಬಿಕ ದೌರ್ಜನ್ಯ ನಡೆಯದಿದ್ದರೂ ಪರಿಹಾರ ಮಂಜೂರು ಮಾಡಿದ್ದ ಸೆಷನ್ಸ್ ಸ್ಕೋರ್ಟ್ ಆದೇಶ ಪ್ರಶ್ನಿಸಿ ರಾಜಾಜಿನಗರದ ವ್ಯಕ್ತಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನ್ಯಾಯಮೂರ್ತಿ ರಾಜೇಂದ್ರ ಬಾದಾಮಿಕರ್ ಅವರಿದ್ದ ಏಕಸದಸ್ಯ ಪೀಠದಲ್ಲಿ ನಡೆದಿದ್ದು, ವಿಚಾರಣೆ ಬಳಿಕ ಈ ಆದೇಶ ನೀಡಲಾಗಿದೆ.
ಪತಿಯಿಂದ ಪತ್ನಿ ದೌರ್ಜನ್ಯಕ್ಕೆ ಒಳಗಾಗಿರುವುದು ಸಾಬೀತಾಗದಿದ್ದರೆ ಕೌಟುಂಬಿಕ ದೌರ್ಜನ್ಯ ತಡೆಯುವ ರಕ್ಷಣಾ ಕಾಯ್ದೆಯಡಿ ಪತ್ನಿಗೆ ಪರಿಹಾರ ನೀಡಲಾಗದು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಈ ಪ್ರಕರಣದಲ್ಲಿ ವಿಚ್ಛೇದನ ಆಗದಿದ್ದರೂ ಪತ್ನಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಹೀಗಿರುವುದರಿಂದ ಇಬ್ಬರ ನಡುವಿನ ಮದುವೆಯ ಹಕ್ಕುಗಳು ರದ್ದುಗೊಂಡಂತಾಗಿದೆ. ಇದರೊಂದಿಗೆ ಕೌಟುಂಬಿಕ ದೌರ್ಜನ್ಯ ನಡೆದಿಲ್ಲವೆಂದು ಕೌಟುಂಬಿಕ ಹಾಗೂ ಸೆಷನ್ಸ್ ನ್ಯಾಯಾಲಯ ನೀಡಿರುವ ಆದೇಶವನ್ನು ಪತ್ನಿ ಪ್ರಶ್ನಿಸಿಲ್ಲವೆಂದು ಆದೇಶದಲ್ಲಿ ತಿಳಿಸಲಾಗಿದೆ.