ಬೆಂಗಳೂರು: ನಕಲಿ ಜಾತಿ ಪ್ರಮಾಣ ಪತ್ರದಿಂದ ಪಡೆದುಕೊಂಡ ಅನುಕೂಲಗಳನ್ನು ಪ್ರಶ್ನಿಸಲು ಯಾವುದೇ ಕಾಲಮಿತಿಯ ಗಡುವು ಇಲ್ಲವೆಂದು ಹೈಕೋರ್ಟ್ ಆದೇಶ ನೀಡಿದೆ.
ನಕಲಿ ಜಾತಿ ಪ್ರಮಾಣ ಪತ್ರ ಪಡೆದು ಆಯುಷ್ ಅಧಿಕಾರಿ ಹುದ್ದೆ ಪಡೆದುಕೊಂಡು ಸೇವೆ ಸಲ್ಲಿಸುತ್ತಿದ್ದ ಡಾ. ಗುಡ್ಡದೇವ್ ಗೊಲ್ಲಪ್ಪ ಯಡ್ರಾಮಿಯವರು ಸಲ್ಲಿಸಿದ ಅರ್ಜಿಯನ್ನು ಕಲಬುರಗಿ ಪೀಠದಲ್ಲಿ ಆಲಿಸಿದ ನ್ಯಾಯಮೂರ್ತಿ ಶ್ರೀಷಾನಂದ ಅವರಿದ್ದ ಏಕ ಸದಸ್ಯ ಪೀಠದಿಂದ ಈ ಆದೇಶ ನೀಡಲಾಗಿದೆ.
ಅರ್ಜಿದಾರರು ತಮ್ಮ ಜಾತಿ ಪ್ರಮಾಣ ಪತ್ರ ರದ್ದುಗೊಳಿಸಿದ ಆದೇಶ ಅನರ್ಜಿತಗೊಳಿಸಬೇಕು ಮತ್ತು ತಮ್ಮನ್ನು ಮತ್ತೆ ಸೇವೆಗೆ ಸೇರ್ಪಡೆ ಮಾಡಿಕೊಳ್ಳಬೇಕೆಂದು ನ್ಯಾಯಾಲಯದ ಮೊರೆ ಹೋಗಿದ್ದರು. ಅರ್ಜಿದಾರರ ದಾಖಲೆ ಪರಿಶೀಲಿಸಿದ ನಂತರ ನ್ಯಾಯಾಲಯ, ವಿಜಯಪುರದಲ್ಲಿ ಕಾಲೇಜಿಗೆ ಸೇರುವಾಗ ಭರ್ತಿ ಮಾಡಿದ ಅರ್ಜಿ ನಮೂನೆಯಲ್ಲಿ ತಾನು ಹಿಂದೂ – ಕುರುಬ ಹಿಂದುಳಿದ ವರ್ಗಕ್ಕೆ ಸೇರಿದವನು ಎಂದು ಉಲ್ಲೇಖಿಸಿದ್ದಾರೆ. ಉದ್ಯೋಗಕ್ಕೆ ಸೇರುವ ವೇಳೆಗೆ ಪರಿಶಿಷ್ಟ ಪಂಗಡದ ಗೊಂಡಾ ಜಾತಿಗೆ ಸೇರಿದವನು ಎಂದು ಬದಲಾಗಲು ಹೇಗೆ ಸಾಧ್ಯವೆಂದು ಹೈಕೋರ್ಟ್ ಪ್ರಶ್ನಿಸಿದೆ.
ಅರ್ಜಿದಾರರು ನಿಜವಾಗಿಯೂ ಎಸ್.ಟಿ. ವರ್ಗಕ್ಕೆ ಸೇರಿದ್ದರೆ ಅವರು 1975ರಲ್ಲಿಯೇ ಕಾಲೇಜಿಗೆ ಸೇರುವಾಗ ಕುರುಬ ಜಾತಿ ಎಂದು ಉಲ್ಲೇಖಿಸುತ್ತಿರಲಿಲ್ಲ. ಹೀಗಾಗಿ ಅರ್ಜಿದಾರರು ಶುದ್ಧ ಹಸ್ತದಿಂದ ನ್ಯಾಯಾಲಯದ ಮೊರೆ ಹೋಗಿಲ್ಲ. ತಮ್ಮ ಪರವಾಗಿ ಆದೇಶ ಪಡೆದುಕೊಳ್ಳಲು ಅನೇಕ ಸಂಗತಿ ಮುಚ್ಚಿಟ್ಟಿದ್ದಾರೆ ಎಂದು ಕೋರ್ಟ್ ಹೇಳಿದೆ.
ನೇಮಕಾತಿ ಪ್ರಾಧಿಕಾರದ ಮುಂದೆ ನಕಲಿ ಜಾತಿ ಪ್ರಮಾಣ ಪತ್ರ ಸಲ್ಲಿಸಿ ಉದ್ಯೋಗ ಪಡೆದು ಸಾಕಷ್ಟು ಅನುಕೂಲತೆ ಪಡೆದುಕೊಂಡಿದ್ದಾರೆ. ಹೀಗಾಗಿ ಅವರ ಅರ್ಜಿಯನ್ನು ವಜಾಗೊಳಿಸುವುದಾಗಿ ನ್ಯಾಯಪೀಠ ತಿಳಿಸಿದೆ.