ಬೆಂಗಳೂರು: ಯಾವುದೇ ಕಟ್ಟಡಕ್ಕೆ ಸ್ವಾಧೀದಿನಾನುಭವ ಪತ್ರ(OC) ನೀಡಿದ ನಂತರವಷ್ಟೇ ಆಸ್ತಿ ತೆರಿಗೆ ವಿಧಿಸಬಹುದು ಎಂದು ಹೈಕೋರ್ಟ್ ಆದೇಶ ನೀಡಿದೆ.
ಮೆಸರ್ಸ್ ಬಿ.ಎಂ. ಹ್ಯಾಬಿಟೇಟ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಪೀಠ ಈ ಆದೇಶ ನೀಡಿದೆ.
ಅರ್ಜಿದಾರ ಸಂಸ್ಥೆ ನಿರ್ಮಿಸಿದ ಮಾಲ್ ಗೆ ಸ್ವಾಧೀನಾನುಭವ ಪತ್ರ ನೀಡುವ ಮುನ್ನವೇ ಹಿಂದಿನ ದಿನಾಂಕದಿಂದ ಆಸ್ತಿ ತೆರಿಗೆ ಪಾವತಿಸುವಂತೆ ಸೂಚಿಸಿ 2008ರ ಫೆಬ್ರವರಿ 15ರಂದು ನೀಡಿದ್ದ ಡಿಮ್ಯಾಂಡ್ ನೋಟಿಸ್ ಅನ್ನು ನ್ಯಾಯಪೀಠ ರದ್ದುಗೊಳಿಸಿದೆ.
2011ರ ಏಪ್ರಿಲ್ 25 ರಿಂದ ಅನ್ವಯವಾಗುವಂತೆ ಅರ್ಜಿದಾರರಿಂದ ತೆರಿಗೆ ಸ್ವೀಕರಿಸುವಂತೆ ಪಾಲಿಕೆಗೆ ಹೈಕೋರ್ಟ್ ನ್ಯಾಯಪೀಠ ಆದೇಶ ನೀಡಿದೆ. ಕಟ್ಟಡಕ್ಕೆ 2010ರಲ್ಲಿ ಎನ್ಒಸಿ ವಿತರಿಸಲಾಗಿದೆ. ಅರ್ಜಿದಾರರು ಕಟ್ಟಡ ಬಳಸಿಲ್ಲ. ಅರ್ಜಿದಾರರು ಒಸಿಗಾಗಿ ಮನವಿ ಸಲ್ಲಿಸಿದ್ದರೂ ಪಾಲಿಗೆ ಅದನ್ನು ಸಕಾಲದಲ್ಲಿ ಪರಿಗಣಿಸದೆ ವಿಳಂಬ ತೋರಿದೆ. ಕಟ್ಟಡ ಪೂರ್ಣಗೊಂಡ ಬಳಿಕ ಒಸಿ ನೀಡಿದ ನಂತರವೇ ತೆರಿಗೆ ವಿಧಿಸಬಹುದೇ ಹೊರತು ಮುಂಚಿತವಾಗಿ ಅಲ್ಲ ಎಂದು ಹೈಕೋರ್ಟ್ ನ್ಯಾಯ ಪೀಠ ಆದೇಶದಲ್ಲಿ ಹೇಳಿದೆ.