ಬೆಂಗಳೂರು: ಮೃತ ತಂದೆಯ ನೌಕರಿಯನ್ನು ವಿವಾಹಿತ ಪುತ್ರಿಗೆ ಅನುಕಂಪದ ಆಧಾರದಲ್ಲಿ ನೀಡಲಾಗದು ಎಂದು ಹೈಕೋರ್ಟ್ ಆದೇಶಿಸಿದೆ.
ಬ್ಯಾಂಕ್ ನಲ್ಲಿ ಸೇವೆ ಸಲ್ಲಿಸುತ್ತಿದ್ದ ತಂದೆಯ ಉದ್ಯೋಗ ತನಗೆ ನೀಡಬೇಕು ಎಂದು ಕೋರಿ ವಿವಾಹಿತ ಪುತ್ರಿ ಸಲ್ಲಿಸಿದ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ. ಅನುಕಂಪದ ಆಧಾರದ ಮೇಲೆ ಕೆಲಸ ನೀಡಲು ನಿರಾಕರಿಸಿದ್ದ ಕೆನರಾ ಬ್ಯಾಂಕ್ ಕ್ರಮ ಪ್ರಶ್ನಿಸಿ ವಿವಾಹಿತೆ ಕೆ. ಲಕ್ಷ್ಮಿ ಎಂಬುವರು ಸಲ್ಲಿಸಿದ ಅರ್ಜಿಯನ್ನು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿದೆ.
ಮೃತರ ಕುಟುಂಬ ಉದ್ಯೋಗದಾತರಾಗಿದ್ದ ಬ್ಯಾಂಕ್ ನಿಂದ ಮಾಸಿಕ ಪಿಂಚಣಿ ಸೇರಿ ಸಾಕಷ್ಟು ಪರಿಹಾರ ಪಡೆದಿದ್ದು ವಿವಾಹಿತ ಪುತ್ರಿಗೆ ಅನುಕಂಪದ ಆಧಾರದಲ್ಲಿ ಉದ್ಯೋಗ ನೀಡಲಾಗದು ಎಂದು ಕೆನರಾ ಬ್ಯಾಂಕ್ ತಿಳಿಸಿದೆ.
ವಾದ, ಪ್ರತಿವಾದ ಆಲಿಸಿದ ನ್ಯಾಯಪೀಠ ಉದ್ಯೋಗದಾತರಿಂದ ನೀಡಲಾದ ಪ್ರಯೋಜನಗಳು ಸಾಮಾನ್ಯವಾಗಿ ಕುಟುಂಬಕ್ಕೆ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶ ಹೊಂದಿದ್ದು, ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡುವುದು ಕುಟುಂಬ ಎದುರಿಸುತ್ತಿರುವ ತಕ್ಷಣದ ಆರ್ಥಿಕ ಬಿಕ್ಕಟ್ಟು ಪರಿಹರಿಸುವಲ್ಲಿ ಅನುಕೂಲದ ಹೊರತಾಗಿ ಉತ್ತರಾಧಿಕಾರಿಗಳಿಗೆ ಉದ್ಯೋಗ ಕಲ್ಪಿಸುವ ನೆಪಕ್ಕೆ ಅಲ್ಲ ಎಂದು ಹೇಳಿದೆ.
ಮಾಸಿಕ ಕುಟುಂಬ ಪಿಂಚಣಿ, ಮೃತರ ಆದಾಯದ ನಷ್ಟದ ನಂತರ ಕುಟುಂಬಕ್ಕೆ ನಿರಂತರ ಆರ್ಥಿಕ ನೆರವು ನೀಡುವ ಆಕಾಂಕ್ಷೆ ಹೊಂದಿದೆ. ಪ್ರಸ್ತುತ ಪ್ರಕರಣದಲ್ಲಿ ನಿವೃತ್ತಿ ಸೌಲಭ್ಯಗಳು ಸ್ವೀಕೃತಿ, ಮಾಸಿಕ ಪಿಂಚಣಿ ಸ್ವರೂಪ ಗಮನಿಸಿದಾಗ ಮೃತರ ಕುಟುಂಬದ ಆರ್ಥಿಕ ಅಗತ್ಯಗಳನ್ನು ಸಮರ್ಪಕವಾಗಿ ಪೂರೈಸಲಾಗುತ್ತಿದೆ ಎಂದು ನ್ಯಾಯಪೀಠ ಆದೇಶ ನೀಡಿದೆ.