ಬೆಂಗಳೂರು: ನಕಲಿ ಪ್ರಮಾಣ ಪತ್ರ ಪಡೆದು ನೌಕರಿ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಹೈಕೋರ್ಟ್ ಆದೇಶ ನೀಡಿದೆ.
ಹಿಂದುಳಿದ ವರ್ಗದ ಪಟ್ಟಿಗೆ ಸೇರಿದ ಕಬ್ಬಲಿಗ ಜಾತಿಯ ಕಲಬುರಗಿಯ ವ್ಯಕ್ತಿಯೊಬ್ಬರು ಎಸ್.ಟಿ. ಸಮುದಾಯದ ಕೋಲಿ ಧೋರ್ ಜಾತಿ ಹೆಸರಲ್ಲಿ ನಕಲಿ ಪ್ರಮಾಣ ಪತ್ರ ಪಡೆದು ಅದರ ಲಾಭ ಪಡೆದ ಬಗ್ಗೆ ತನಿಖೆ ನಡೆಸುವಂತೆ ಹೈಕೋರ್ಟ್ ಆದೇಶ ನೀಡಿದೆ.
ಇದೇ ವೇಳೆ ನಕಲಿ ಜಾತಿ ಪ್ರಮಾಣ ಪತ್ರದ ಪ್ರಯೋಜನದಿಂದ ಬಿಎಸ್ಎನ್ಎಲ್ ನಲ್ಲಿ ಉದ್ಯೋಗ ಗಿಟ್ಟಿಸಿಕೊಂಡ ಆರೋಪದ ಮೇಲೆ ತಮ್ಮ ವಿರುದ್ಧ ದಾಖಲಾದ ಪ್ರಕರಣ ರದ್ದುಪಡಿಸುವಂತೆ ಕೋರಿ ಶ್ರೀಮಂತ್ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕೆ. ನಟರಾಜನ್ ಅವರ ಪೀಠ ತಿರಸ್ಕರಿಸಿ ಈ ಆದೇಶ ನೀಡಿದೆ.
ದಾಖಲೆಗಳನ್ನು ಪರಿಶೀಲಿಸಿದಾಗ ಅರ್ಜಿದಾರರು ಕಬ್ಬಲಿಗ ಜಾತಿಗೆ ಸೇರಿದವರಾಗಿದ್ದಾರೆ. ಅವರು ಸುಳ್ಳು ಮಾಹಿತಿ ನೀಡಿ 1978 ರಲ್ಲಿ ಬಿಎಸ್ಎನ್ಎಲ್ ನಿಂದ ಉದ್ಯೋಗ ಪಡೆದು ಅದರ ಲಾಭ ಮಾಡಿಕೊಂಡಿದ್ದಾರೆ. ಆದರೆ ನಂತರ ಜಿಲ್ಲಾ ಜಾತಿ ಪ್ರಮಾಣ ಪತ್ರ ಪರಿಶೀಲನಾ ಸಮಿತಿ ಪ್ರಮಾಣ ಪತ್ರ ರದ್ದು ಮಾಡಿದೆ. ಹೀಗಾಗಿ ಪ್ರಕರಣದ ತನಿಖೆಯಾಗಬೇಕಿದೆ. ರಾಜ್ಯ ಸರ್ಕಾರವನ್ನು ವಂಚಿಸಿರುವ ಹಾಗೂ ಎಸ್.ಟಿ. ಸಮುದಾಯಕ್ಕೆ ಸೇರಿದವರ ಹಕ್ಕು ಕಸಿದುಕೊಂಡ ಅರ್ಜಿದಾರರ ವಿರುದ್ಧ ವಿಚಾರಣಾ ಪ್ರಕ್ರಿಯೆ ನಡೆಸಬೇಕು ಎಂದು ಹೈಕೋರ್ಟ್ ಆದೇಶ ನೀಡಿದೆ.