ಬೆಂಗಳೂರು: ಮುಬಾರತ್ ಒಪ್ಪಂದ ಮಾಡಿಕೊಂಡು ಮದುವೆ ರದ್ದು ಮಾಡಿಕೊಳ್ಳಲು ಪರಸ್ಪರ ನಿರ್ಧರಿಸಿದ ಮುಸ್ಲಿಂ ದಂಪತಿಗೆ ವಿವಾಹ ವಿಚ್ಛೇದನ ಮಂಜೂರು ಮಾಡುವ ಅಧಿಕಾರ ಕೌಟುಂಬಿಕ ನ್ಯಾಯಾಲಯಕ್ಕೆ ಇದೆ ಎಂದು ಹೈಕೋರ್ಟ್ ಆದೇಶಿಸಿದೆ.
ಶಬನಂ ಮತ್ತು ಪರ್ವೀನ್ ಅಹಮದ್ ದಂಪತಿ ಸಲ್ಲಿಸಿದ ಮೇಲ್ಮನವಿಯನ್ನು ಹೈಕೋರ್ಟ್ ನ್ಯಾಯಮೂರ್ತಿ ಅನು ಸಿವರಾಮನ್ ಮತ್ತು ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಅವರಿದ್ದ ಹೈಕೋರ್ಟ್ ವಿಭಾಗೀಯಪೀಠ ಮಾನ್ಯ ಮಾಡಿದೆ. ದಂಪತಿ ಮುಬಾರಕ್ ಒಪ್ಪಂದ ಮಾಡಿಕೊಂಡಂತೆ ವಿವಾಹವನ್ನು ಅನೂರ್ಜಿತಗೊಳಿಸಲಾಗಿದೆ.
ದಂಪತಿಯೊಂದಿಗೆ ಚರ್ಚೆ ನಡೆಸಿದ ನ್ಯಾಯಪೀಠ ದಂಪತಿ ತಮಗೆ ತಿಳಿದು ಮುಬಾರಕ್ ಒಪ್ಪಂದ ಮಾಡಿಕೊಂಡಿದ್ದು, ಇಬ್ಬರ ಸಮ್ಮತಿ ಮೇರೆಗೆ ಸಂಬಂಧ ಮುಂದುವರೆಸದಿರಲು ನಿರ್ಧರಿಸಿದ್ದಾರೆ. ಹೀಗಾಗಿ ಕೌಟುಂಬಿಕ ನ್ಯಾಯಾಲಯ ಅವರ ಅರ್ಜಿ ಮಾನ್ಯ ಮಾಡದೆ ತಪ್ಪೆಸಗಿದೆ ಎಂದು ಅಭಿಪ್ರಾಯಪಟ್ಟು ದಂಪತಿಗೆ ವಿಚ್ಛೇದನ ಮಂಜೂರು ಮಾಡಿದೆ.
ಕೌಟುಂಬಿಕ ನ್ಯಾಯಾಲಯಗಳ ಕಾಯ್ದೆಯ ಸೆಕ್ಷನ್ 7ರ ಪ್ರಕಾರ ಯಾವುದೇ ವ್ಯಕ್ತಿಗೆ ಮದುವೆ ಸಿಂಧುತ್ವ ನಿರ್ಧರಿಸುವ ಅಧಿಕಾರ ಕೌಟುಂಬಿಕ ನ್ಯಾಯಾಲಯಕ್ಕೆ ಇದೆ. ಈ ಪ್ರಕರಣದಲ್ಲಿ ಮುಬಾರಕ್ ಒಪ್ಪಂದದಂತೆ ಮದುವೆ ಅನುರ್ಚಿತಗೊಳಿಸಬಹುದಾಗಿದೆ ಎಂದು ನ್ಯಾಯಪೀಠ ಹೇಳಿದೆ. ಪರಸ್ಪರ ಒಪ್ಪಿಗೆಯೊಂದಿಗೆ ಮದುವೆ ಅನೂರ್ಜಿಗೊಳಿಸಲು ಒಪ್ಪಂದ ಮಾಡಿಕೊಂಡಿರುವಾಗ ಕೌಟುಂಬಿಕ ನ್ಯಾಯಾಲಯ ಅವರ ಅರ್ಜಿ ಮಾನ್ಯ ಮಾಡಿ ಮದುವೆ ರದ್ದುಗೊಳಿಸಬೇಕಿತ್ತು ಎಂದು ಹೇಳಿದ ನ್ಯಾಯಪೀಠ ಈ ಕುರಿತಾದ ಹಲವು ತೀರ್ಪುಗಳನ್ನು ಉಲ್ಲೇಖಿಸಿದೆ.
2019ರ ಏಪ್ರಿಲ್ 7ರಂದು ಉತ್ತರ ಪ್ರದೇಶದ ಅಲಹಾಬಾದ್ ನ ಕರ್ಬಾಲದ ನಂದ ಗಾರ್ಡನ್ ನ ನಡೆದ ಮದುವೆ ರದ್ದುಗೊಳಿಸುವಂತೆ ಕೋರಿ ದಂಪತಿ ಕೋರ್ಟ್ ಮೊರೆ ಹೋಗಿದ್ದರು. 2021ರ ಏಪ್ರಿಲ್ 3ರಂದು ಮಾಡಿಕೊಂಡಿದ್ದ ಮುಬಾರತ್ ಡೀಡ್ ಸಲ್ಲಿಸಿ, ಮೊಹಮ್ಮದೀಯ ಸಂಪ್ರದಾಯದಂತೆ ಮದುವೆ ರದ್ದುಗೊಳಿಸಲು ಕೋರಿದ್ದರು.
ಆದರೆ, ಕೌಟುಂಬಿಕ ನ್ಯಾಯಾಲಯ, ಮುಬಾರಕ್ ಮದುವೆ ರದ್ದುಗೊಳಿಸಲು ಒಂದು ವಿಧಾನವಿದೆ. ಮುಸ್ಲಿಂ ವಿವಾಹ ರದ್ದತಿ ಕಾಯ್ದೆ 1937 ರ ಪ್ರಕಾರ ಪರಸ್ಪರ ಸಮ್ಮತಿ ಮೇರೆಗೆ ಮೊಹಮ್ಮದೀಯ ಮದುವೆ ರದ್ದು ಮಾಡಲು ಅವಕಾಶವಿಲ್ಲ. ಹಾಗಾಗಿ ಅರ್ಜಿ ವಜಾಗೊಳಿಸಲಾಗುತ್ತಿದೆ ಎಂದು ಆದೇಶ ನೀಡಿತ್ತು.