ಬೆಂಗಳೂರು: ಗುತ್ತಿಗೆ ನೌಕರರಿಗೂ ಗ್ರಾಚ್ಯುಟಿ ಅನ್ವಯವಾಗಲಿದೆ ಎಂದು ಹೈಕೋರ್ಟ್ ಆದೇಶ ನೀಡಿದೆ. ಕಾಯಂ ನೌಕರ, ಗುತ್ತಿಗೆ ನೌಕರರ ನಡುವೆ ತಾರತಮ್ಯ ಮಾಡುವಂತಿಲ್ಲ ಎಂದು ಸ್ಪಷ್ಟನೆ ನೀಡಿದೆ. ಸರ್ಕಾರಿ ಸೇವೆ ಕಾಯಂ ಆಗುವ ಮೊದಲು ನೌಕರ ದಿನದ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸಿದ್ದಲ್ಲಿ ಗುತ್ತಿಗೆ ಅವಧಿಗೂ ಸರ್ಕಾರ ಗ್ರಾಚ್ಯುಟಿ ಪಾವತಿಸಬೇಕು ಎಂದು ಹೈಕೋರ್ಟ್ ಆದೇಶ ನೀಡಿದೆ.
ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ನಿವೃತ್ತ ಸರ್ಕಾರಿ ಶಾಲೆ ಶಿಕ್ಷಕ ಬಸವೇಗೌಡ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ ಈ ಆದೇಶ ನೀಡಿದೆ. ಗ್ರಾಚ್ಯುಟಿ ಪಾವತಿ ಕಾಯ್ದೆ – 1972ರ ನಿಯಮಗಳ ಪ್ರಕಾರ ಗ್ರಾಚ್ಯುಟಿ ವಿಚಾರದಲ್ಲಿ ಕಾಯಂ ಸರ್ಕಾರಿ ನೌಕರ ಹಾಗೂ ಗುತ್ತಿಗೆ ನೌಕರರ ನಡುವೆ ಯಾವುದೇ ವ್ಯತ್ಯಾಸ ಆಗುವುದಿಲ್ಲ. ಹೀಗಾಗಿ 75 ವರ್ಷದ ನಿವೃತ್ತ ಸರ್ಕಾರಿ ನೌಕರರಾಗಿರುವ ಅರ್ಜಿದಾರರಿಗೆ ಅವರು ದಿನ ಗುತ್ತಿಗೆ ನೌಕರರಾಗಿ ದುಡಿದ 10 ವರ್ಷಗಳ ಅವಧಿಗೆ ಗ್ರಾಚ್ಯುಟಿ ಮೊತ್ತವನ್ನು 4 ವಾರಗಳಲ್ಲಿ ನೀಡಬೇಕು. 4 ವಾರದಲ್ಲಿ ಹಣ ಪಾವತಿಸಲು ಆಗದಿದ್ದರೆ ವಿಳಂಬ ಮಾಡಿದ ಪ್ರತಿದಿನಕ್ಕೆ ಒಂದು ಸಾವಿರ ರೂ. ದಂಡ ಪಾವತಿಸಬೇಕು ಎಂದು ಸರ್ಕಾರಕ್ಕೆ ನಿರ್ದೇಶನ ನೀಡಿದೆ.