ಬೆಂಗಳೂರು: ಭಾರತೀಯ ರೈಲ್ವೆ ಸೇವಾ ನಿಯಮಗಳ ಪ್ರಕಾರ ಮೃತಪಟ್ಟ ಉದ್ಯೋಗಿಗೆ ಸೇರುವ ಪಿಂಚಣಿಯನ್ನು ಒಬ್ಬರು ಅಥವಾ ಹೆಚ್ಚಿನ ಪತ್ನಿಯರು ಸಮಾನವಾಗಿ ಪಡೆಯಲು ಅರ್ಹರಾಗಿರುತ್ತಾರೆ ಎಂದು ಹೈಕೋರ್ಟ್ ಆದೇಶಿಸಿದೆ.
ಮೊದಲನೇ ಪತ್ನಿ ಮತ್ತು ಆಕೆಯ ಇಬ್ಬರು ಮಕ್ಕಳಿಗೆ ಶೇಕಡ 50ರಷ್ಟು ಕುಟುಂಬ ಪಿಂಚಣಿ ಮಂಜೂರು ಮಾಡುವಂತೆ ಕೌಟುಂಬಿಕ ನ್ಯಾಯಾಲಯ ನೈರುತ್ಯ ರೈಲ್ವೆಗೆ ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಮೃತ ರೈಲ್ವೆ ಉದ್ಯೋಗಿ ರಮೇಶ ಬಾಬು ಅವರ ಎರಡನೇ ಪತ್ನಿ ಬೆಂಗಳೂರಿನ ಮಾಗಡಿ ನಿವಾಸಿ ಪುಷ್ಪಾ ಅವರು ಸಲ್ಲಿಸಿದ ತಕರಾರು ಅರ್ಜಿಯನ್ನು ಹೈಕೋರ್ಟ್ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ ಭಾಗಶಃ ಪುರಸ್ಕರಿಸಿ ಈ ಆದೇಶ ಮಾಡಿದೆ.
ರಮೇಶ ಬಾಬು ಅವರಿಗೆ ಸೇರಿದ ಪಿಂಚಣಿಯನ್ನು ಇಬ್ಬರು ಪತ್ನಿಯರಿಗೆ ಸಮಾನವಾಗಿ ಹಂಚಿಕೆ ಮಾಡಬೇಕೆಂದು ನೈರುತ್ಯ ರೈಲ್ವೆ ಮಂಡಳಿಗೆ ಹೈಕೋರ್ಟ್ ಆದೇಶಿಸಿದೆ. ರೈಲು ಸೇವೆಗಳ ಪಿಂಚಣಿ ನಿಯಮಗಳ ಪ್ರಕಾರ ಮೃತಪಟ್ಟ ಉದ್ಯೋಗಿಯ ಒಬ್ಬರು ಅಥವಾ ಹೆಚ್ಚಿನ ವಿಧವೆ ಪತ್ನಿಯರಿಗೆ ಕುಟುಂಬ ಪಿಂಚಣಿ ಪಡೆಯಲು ನಿಯಮದಲ್ಲಿ ಸ್ಪಷ್ಟವಾಗಿ ಹಕ್ಕು ಕಲ್ಪಿಸಲಾಗಿದೆ. ಸಾವನ್ನಪ್ಪಿದ ಉದ್ಯೋಗಿಯ ವಿಧವೆ ಪತ್ನಿಯರಿಗೆ ಪಿಂಚಣಿಯನ್ನು ಸಮಾನವಾಗಿ ಹಂಚಿಕೆ ಮಾಡಲಾಗುವುದು. ರೈಲ್ವೆ ಉದ್ಯೋಗಿಗೆ ಒಬ್ಬರಿಗಿಂತ ಹೆಚ್ಚು ಪತ್ನಿಯರಿದ್ದಾಗ ಇದು ಅನ್ವಯವಾಗಲಿದೆ ಎಂದು ಹೇಳಲಾಗಿದೆ.