
ಬೆಂಗಳೂರು: ಕೆಲಸದ ಸಂದರ್ಭದಲ್ಲಿ ನೌಕರ ಗಾಯಗೊಂಡರೆ ಪರಿಹಾರಕ್ಕಾಗಿ ಪರಿಹಾರ ಆಯುಕ್ತರ ಮುಂದೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಕಾರ್ಮಿಕ ನ್ಯಾಯಾಲಯದಲ್ಲಿ ಅಲ್ಲವೆಂದು ಹೈಕೋರ್ಟ್ ಆದೇಶ ನೀಡಿದೆ.
ಈ ಕುರಿತು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಆಲಿಸಿದ ನ್ಯಾಯಮೂರ್ತಿ ಕೆ ಎಸ್ ಮುದ್ಗಲ್ ಅವರಿದ್ದ ಏಕಸದಸ್ಯ ಪೀಠದಿಂದ ಆದೇಶ ನೀಡಲಾಗಿದೆ.
1923 ನೌಕರರ ಪರಿಹಾರ ಕಾಯ್ದೆ ಅನ್ವಯ ಪರಿಹಾರ ಕೋರಿ ಸಲ್ಲಿಕೆಯಾದ ಅರ್ಜಿಗಳನ್ನು ಪರಿಗಣಿಸುವ ಯಾವುದೇ ಅಧಿಕಾರ ಕಾರ್ಮಿಕ ನ್ಯಾಯಾಲಯಕ್ಕೆ ಇಲ್ಲ ಎಂದು ಹೇಳಲಾಗಿದೆ. ಕಾರ್ಮಿಕ ನ್ಯಾಯಾಲಯಕ್ಕೆ ಕೈಗಾರಿಕಾ ವ್ಯಾಜ್ಯ ಕಾಯ್ದೆ ಅನ್ವಯ ಕಾರ್ಮಿಕರ ಪರಿಹಾರ ಅರ್ಜಿಯನ್ನು ಪರಿಹರಿಸುವ ಅಧಿಕಾರವ್ಯಾಪ್ತಿ ಇಲ್ಲವೆಂದು ಹೈಕೋರ್ಟ್ ಆದೇಶಿಸಿದೆ.
ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಚಾಲಕ ಕೆ. ಶಿವರಾಂ ಅವರು ಬಸ್ ಚಾಲನೆ ವೇಳೆ ಅಪಘಾತಕ್ಕೀಡಾಗಿ ಗಾಯಗೊಂಡಿದ್ದರು. ಮಂಗಳೂರಿನ ಕಾರ್ಮಿಕ ನ್ಯಾಯಾಲಯದಲ್ಲಿ ಕೈಗಾರಿಕಾ ವ್ಯಾಜ್ಯ ಕಾಯಿದೆ ಅಡಿ ವಾರ್ಷಿಕ ಶೇಕಡ 18 ರ ಬಡ್ಡಿ ಸಹಿತ 5.5 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಅರ್ಜಿ ಸಲ್ಲಿಸಿದ್ದರು.
ಅವರು ಈಗಾಗಲೇ ಮೋಟಾರು ವಾಹನ ಕಾಯ್ದೆ ಅಡಿ ಪರಿಹಾರ ಪಡೆದಿದ್ದಾರೆ ಎಂದು ಸಾರಿಗೆ ನಿಗಮ ತಿಳಿಸಿದ್ದು, ಮತ್ತೆ ಪರಿಹಾರ ಪಡೆಯುವ ಹಕ್ಕು ಎಂದು ವಾದಿಸಿತ್ತು. ವಾದ ಪ್ರತಿವಾದ ಆಲಿಸಿದ ಕಾರ್ಮಿಕ ನ್ಯಾಯಾಲಯ ಮೋಟಾರು ವಾಹನ ಕಾಯ್ದೆ ಮತ್ತು ನೌಕರರ ಪರಿಹಾರ ಕಾಯ್ದೆ ಇವೆರಡರ ಅಡಿಯಲ್ಲೂ ಪರಿಹಾರ ಪಡೆದುಕೊಳ್ಳಬಹುದು ಎಂದು ಆದೇಶ ನೀಡಿತ್ತು. ಈ ಆದೇಶವನ್ನು ಪ್ರಶ್ನಿಸಿದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದು, ಗಾಯಗೊಂಡ ನೌಕರ ಪರಿಹಾರ ಆಯುಕ್ತರ ಮುಂದೆ ಅರ್ಜಿ ಸಲ್ಲಿಸಬೇಕೆ ಹೊರತು ಕಾರ್ಮಿಕ ಕೋರ್ಟ್ ನಲ್ಲಿ ಅಲ್ಲವೆಂದು ಹೈಕೋರ್ಟ್ ಆದೇಶಿಸಿದೆ.