ಬೆಂಗಳೂರು: ಲಂಚ ಸ್ವೀಕಾರ ಪ್ರಕರಣದಲ್ಲಿ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಲಂಚದ ಹಣ ವಶಪಡಿಸಿಕೊಂಡರಷ್ಟೇ ಆರೋಪ ಸಾಬೀತಾಗದು, ಲಂಚಕ್ಕೆ ಬೇಡಿಕೆ ಇಟ್ಟ ಮತ್ತು ಸ್ವೀಕರಿಸಿದ ಸಾಕ್ಷ್ಯ ನೀಡಬೇಕು ಎಂದು ಹೈಕೋರ್ಟ್ ತಿಳಿಸಿದೆ.
ಲಂಚ ಸ್ವೀಕಾರ ಪ್ರಕರಣದಲ್ಲಿ ಆರೋಪ ಸಾಬೀತಾಗಲು ಆರೋಪಿಯಿಂದ ಲಂಚದ ಹಣ ವಶಪಡಿಸಿಕೊಂಡರಷ್ಟೇ ಸಾಲದು, ಆರೋಪಿ ಲಂಚಕ್ಕೆ ಬೇಡಿಕೆ ಇಟ್ಟ ಮತ್ತು ಸ್ವೀಕರಿಸಿದ ಸಮಂಜಸ ಸಾಕ್ಷ್ಯಗಳೊಂದಿಗೆ ಸಾಬೀತುಪಡಿಸುವುದು ಕಡ್ಡಾಯವೆಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
2007 ರಲ್ಲಿ ಅಂಬೇಡ್ಕರ್ ನಿಗಮದಿಂದ ನೀಡಲಾಗುವ ಸಾಲಕ್ಕೆ ಫಲಾನುಭವಿಯೊಬ್ಬರ ಅರ್ಜಿ ಶಿಫಾರಸಿಗೆ 4,500 ರೂ. ಲಂಚ ಪಡೆದ ಆರೋಪದಲ್ಲಿ ಚಾಮರಾಜನಗರ ಜಿಲ್ಲೆ ಯಳಂದೂರು ತಾಲೂಕು ಪಂಚಾಯಿತಿ ಮಾಜಿ ಕಾರ್ಯಕಾರಿ ಅಧಿಕಾರಿ ಬಿ.ವಿ. ರಮೇಶ್ ಗೆ ಲೋಕಾಯುಕ್ತ ನ್ಯಾಯಾಲಯ ವಿಧಿಸಿದ ನಾಲ್ಕು ವರ್ಷ ಜೈಲು ಶಿಕ್ಷೆಯನ್ನು ನ್ಯಾಯಮೂರ್ತಿ ಕೆ. ರಾಜೇಶ್ ರೈ ಅವರಿದ್ದ ಹೈಕೋರ್ಟ್ ಪೀಠ ರದ್ದುಪಡಿಸಿ ಆದೇಶ ನೀಡಿದೆ.
ಈ ಪ್ರಕರಣದಲ್ಲಿ ರಮೇಶ್ ಹಣಕ್ಕೆ ಬೇಡಿಕೆ ಇಟ್ಟಿದ್ದರು ಮತ್ತು ಸ್ವೀಕರಿಸಿದ್ದರು ಎಂಬುದನ್ನು ಸಾಬೀತುಪಡಿಸಲು ತನಿಖಾಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ. ಖುದ್ದಾಗಿ ದೂರುದಾರನೇ ಪ್ರತಿಕೂಲ ಸಾಕ್ಷ್ಯ ನುಡಿದಿದ್ದಾರೆ. ಸಾಕ್ಷ್ಯವಾಗಿ ಸಲ್ಲಿಕೆ ಮಾಡಿದ್ದ ಆಡಿಯೋ ಕ್ಲಿಪ್ ನಲ್ಲಿ ರಮೇಶ್ ಲಂಚಕ್ಕೆ ಬೇಡಿಕೆ ಇಟ್ಟ ಬಗ್ಗೆ ಸ್ಪಷ್ಟವಾಗಿ ತಿಳಿಸುವುದಿಲ್ಲ. ಇತರೆ ಇಬ್ಬರೂ ಸಾಕ್ಷಿಗಳ ಹೇಳಿಕೆಯಿಂದ ಆರೋಪಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಅಂಶ ಸ್ಪಷ್ಟಪಡುವುದಿಲ್ಲ ಎಂದು ಹೈಕೋರ್ಟ್ ತೀರ್ಮಾನಿಸಿದ್ದು, ರಮೇಶ್ ಅವರನ್ನು ಖುಲಾಸೆಗೊಳಿಸಿ ತೀರ್ಪು ನೀಡಿದೆ.