ಬೆಂಗಳೂರು: ನೇರವಾಗಿ ದತ್ತು ಪಡೆಯುವುದು ಅಪರಾಧವಲ್ಲ ಎಂದು ಧಾರವಾಡದ ಹೈಕೋರ್ಟ್ ಪೀಠ ಮಹತ್ವದ ಆದೇಶ ನೀಡಿದೆ. ಪೋಷಕರಿಂದ ನೇರವಾಗಿ ಮಗು ದತ್ತು ಪಡೆದುಕೊಂಡು ಪೋಷಿಸುವುದು ಅಪರಾಧವಲ್ಲವೆಂದು ತೀರ್ಪು ನೀಡಿದೆ.
ಕೊಪ್ಪಳ ಜಿಲ್ಲೆ ಗಂಗಾವತಿಯ ಬಾನುಬೇಗಂ ಇತರರು ದತ್ತು ಪಡೆಯುವಲ್ಲಿ ನಿಯಮ ಪಾಲಿಸಿಲ್ಲ ಎಂದು ತಮ್ಮ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ರದ್ದು ಮಾಡಬೇಕೆಂದು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಧಾರವಾಡದ ಹೈಕೋರ್ಟ್ ಪೀಠದಲ್ಲಿ ನಡೆದಿದೆ. ನ್ಯಾ. ಹೇಮಂತ್ ಚಂದನ ಗೌಡರವರ ಏಕಸದಸ್ಯಪೀಠದಲ್ಲಿ ವಿಚಾರಣೆ ನಡೆದಿದ್ದು, ಪೋಷಕರಿಂದ ನೇರವಾಗಿ ಮಗು ದತ್ತು ಪಡೆದು ಪೋಷಿಸುವುದು ಅಪರಾಧವಲ್ಲವೆಂದು ಏಕ ಸದಸ್ಯ ಪೀಠ ಆದೇಶ ನೀಡಿದೆ.
ಬಾನು ಬೇಗಂ ಅವರಿಗೆ 2018ರ ಸೆಪ್ಟಂಬರ್ 18ರಂದು ಅವಳಿ ಹೆಣ್ಣುಮಕ್ಕಳು ಜನಿಸಿದ್ದು, ಮಗು ಇಲ್ಲದ ಜರೀನಾ ಬೇಗಂ ಮತ್ತು ಅಬ್ದುಲ್ ಸಾಬ್ ಅವರು 20 ರೂ. ಸ್ಟಾಂಪ್ ಪೇಪರ್ ಮೇಲೆ ಒಪ್ಪಂದ ಮಾಡಿಕೊಂಡು ಒಂದು ಮಗುವನ್ನು ದತ್ತು ಪಡೆದು ಸಾಕುತ್ತಿದ್ದರು. ನಿಯಮ ಪಾಲಿಸದೆ ನೇರವಾಗಿ ಪೋಷಕರಿಂದ ದತ್ತು ತೆಗೆದುಕೊಂಡು ಮಗು ಸಾಕುತ್ತಿರುವ ಬಗ್ಗೆ ಪ್ರಕರಣ ದಾಖಲಾಗಿತ್ತು.