ಅತ್ಯಾಚಾರ ಪ್ರಕರಣ ಒಂದರ ವಿಚಾರಣೆ ವೇಳೆ ದೆಹಲಿ ಹೈಕೋರ್ಟ್ ಮಹತ್ವದ ಅಭಿಮತ ವ್ಯಕ್ತಪಡಿಸಿದ್ದು, ಮಹಿಳೆ ಮುಂದಿನ ಪರಿಣಾಮಗಳ ಕುರಿತು ಆಲೋಚಿಸಿ ದೈಹಿಕ ಸಂಪರ್ಕ ಹೊಂದಿದ್ದಾಗ ತಪ್ಪು ಗ್ರಹಿಕೆಯಲ್ಲಿ ಆಕೆ ಇದಕ್ಕೆ ಸಮ್ಮತಿ ಸೂಚಿಸಿದ್ಧಳು ಎನ್ನಲಾಗದು ಎಂದು ಹೇಳಿದೆ.
ಪುರುಷನೊಬ್ಬನ ವಿರುದ್ಧ ದಾಖಲಾಗಿದ್ದ ಅತ್ಯಾಚಾರ ಪ್ರಕರಣವನ್ನು ರದ್ದುಗೊಳಿಸುವ ವೇಳೆ ಈ ಅಭಿಮತ ವ್ಯಕ್ತಪಡಿಸಲಾಗಿದ್ದು, ಅಲ್ಲದೆ ಅತ್ಯಾಚಾರ ಆರೋಪ ಹೊತ್ತ ಪುರುಷ, ಬಳಿಕ ಸ್ವ ಇಚ್ಛೆಯಿಂದ ಸಂತ್ರಸ್ತ ಮಹಿಳೆಯನ್ನು ವಿವಾಹವಾಗಿರುವುದನ್ನು ನ್ಯಾಯಾಲಯ ಪರಿಗಣಿಸಿದೆ.
ಅತ್ಯಾಚಾರ ದೂರು ಸಲ್ಲಿಸಿದ್ದ ಮಹಿಳೆ, ಆತ ಮದುವೆಯಾಗುವುದಾಗಿ ನಂಬಿಸಿ ನನ್ನ ಜೊತೆ ಪದೇಪದೇ ದೈಹಿಕ ಸಂಪರ್ಕ ಹೊಂದಿದ್ದ. ಬಳಿಕ ಮದುವೆಯಾಗಲು ನಿರಾಕರಿಸಿದ್ದ. ಅಲ್ಲದೆ ಕುಟುಂಬಸ್ಥರು ನಿಶ್ಚಯಿಸಿದ್ದ ಮತ್ತೊಬ್ಬಳ ಜೊತೆ ಮದುವೆಯಾಗಲು ಮುಂದಾಗಿದ್ದ ಎಂದು ಆರೋಪಿಸಿ ದೂರು ದಾಖಲಿಸಿದ್ದರು.
ಬಳಿಕ ಅದೇ ವ್ಯಕ್ತಿಯನ್ನು ವಿವಾಹವಾಗಿದ್ದ ಮಹಿಳೆ, ತಾನು ಈಗ ಆತನ ಜೊತೆ ಸಂತಸದಿಂದ ಬಾಳ್ವೆ ನಡೆಸುತ್ತಿರುವುದಾಗಿ ತಿಳಿಸಿದ್ದಳಲ್ಲದೆ ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಬಯಸುವುದಿಲ್ಲ ಎಂದು ನ್ಯಾಯಾಲಯಕ್ಕೆ ಹೇಳಿದ್ದರು.
ಈ ಸಂದರ್ಭದಲ್ಲಿ ವಿಚಾರಣೆ ನಡೆಸಿದ ದೆಹಲಿ ಹೈ ಕೋರ್ಟ್ ನ್ಯಾಯಮೂರ್ತಿ ಅನೂಪ್ ಕುಮಾರ್ ಅವರು, ಸಂತ್ರಸ್ತೆ ಜೊತೆ ದೈಹಿಕ ಸಂಪರ್ಕ ಹೊಂದುವಾಗ ಪುರುಷ ತಾನು ಮದುವೆಯಾಗುವುದಾಗಿ ನೀಡಿದ್ದ ಭರವಸೆ ಈಡೇರಿಸುವ ಉದ್ದೇಶ ಹೊಂದಿರಲಿಲ್ಲ ಎಂಬುದನ್ನು ಸಾಬೀತುಪಡಿಸಲು ಸ್ಪಷ್ಟವಾದ ಆಧಾರಗಳಿಲ್ಲದಿದ್ದರೆ, ಮಹಿಳೆ ತಪ್ಪಾಗಿ ಗ್ರಹಿಸಿ ದೈಹಿಕ ಸಂಪರ್ಕಕ್ಕೆ ಸಮ್ಮತಿ ನೀಡಿದ್ದಳು ಎಂದು ಹೇಳಲಾಗದು. ಅಲ್ಲದೆ ತನಿಖೆ ಸಂದರ್ಭದಲ್ಲಿ ಪುರುಷ ಸ್ವಇಚ್ಚೆಯಿಂದ ಆಕೆಯನ್ನು ಮದುವೆಯಾಗಿದ್ದು, ಹೀಗಾಗಿ ಕೊಟ್ಟ ಮಾತನ್ನು ಮೀರುವ ಉದ್ದೇಶ ಆತನಿಗೆ ಇರಲಿಲ್ಲ ಎಂದು ಹೇಳಲಾಗದು ಎಂಬ ಅಭಿಪ್ರಾಯಪಟ್ಟು ಅತ್ಯಾಚಾರ ಪ್ರಕರಣವನ್ನು ರದ್ದುಪಡಿಸಿದ್ದಾರೆ.