ಬೆಂಗಳೂರು: ಸರ್ಕಾರಿ ಅಧಿಕಾರಿಗಳ ವಿರುದ್ಧ ಗಂಭೀರ ಆರೋಪ ಎದುರಾದ ಕೂಡಲೇ ವರ್ಗಾವಣೆ ಮಾಡುವುದು ಪರಿಹಾರವಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಅಧಿಕಾರಿಯೊಬ್ಬರನ್ನು ಅವಧಿಪೂರ್ವ ವರ್ಗಾವಣೆ ಮಾಡಿ ಸರ್ಕಾರ ಹೊರಡಿಸಿದ್ದ ಆದೇಶ ರದ್ದುಪಡಿಸಿದ್ದ ಕೆಎಟಿ ಕ್ರಮವನ್ನು ಹೈಕೋರ್ಟ್ ಮಾನ್ಯ ಮಾಡಿದೆ.
ಧಾರವಾಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ. ಬಸನಗೌಡ ಅವರನ್ನು ವರ್ಗಾವಣೆ ಮಾಡಿದ್ದ ಸರ್ಕಾರದ ಆದೇಶ ಕ್ರಮವನ್ನು ಕೆಎಟಿ ರದ್ದುಪಡಿಸಿತ್ತು. ಇದನ್ನು ಪ್ರಶ್ನಿಸಿ ಬಸವನಗೌಡ ಅವರ ಹುದ್ದೆಗೆ ವರ್ಗಾವಣೆಗೊಂಡಿದ್ದ ಡಾ. ಪಾಟೀಲ್ ಶಶಿ ಸಲ್ಲಿಸಿದ ಮೇಲ್ಮನವಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರ ನೇತೃತ್ವದ ವಿಭಾಗಿಯ ಪೀಠ ಧಾರವಾಡ ಪೀಠದಲ್ಲಿ ಈ ಆದೇಶ ನೀಡಿದೆ.
ಆರೋಪ ಕೇಳಿ ಬಂದ ಸಂದರ್ಭದಲ್ಲಿ ಸಂಬಂಧಪಟ್ಟ ಪ್ರಾಧಿಕಾರದಿಂದ ಆಂತರಿಕ ವಿಚಾರಣೆ ನಡೆಸಿ ಸತ್ಯಾಸತ್ಯತೆ ಅವಲೋಕನ ಮಾಡಬೇಕು. ಆರೋಪ ಸಾಬೀತದಲ್ಲಿ ಶಿಸ್ತು ಕ್ರಮ ಕೈಗೊಳ್ಳಬೇಕು. ತನಿಖೆಗೆ ಅಡ್ಡಿಯಾಗುವಂತಹ ಪರಿಸ್ಥಿತಿ ಇದ್ದ ಸಂದರ್ಭದಲ್ಲಿ ಅಧಿಕಾರಿಯನ್ನು ಮಧ್ಯಂತರ ಅವಧಿಗೆ ಅಮಾನತು ಮಾಡಬಹುದು. ಈ ಪ್ರಕ್ರಿಯೆ ಕೈಗೊಳ್ಳದೆ ಏಕಾಏಕಿ ವರ್ಗಾವಣೆ ಮಾಡುವುದು ಪರಿಹಾರವಲ್ಲ ಎಂದು ನ್ಯಾಯಪೀಠ ಹೇಳಿದೆ.
ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕಾದ ಸರ್ಕಾರ ತನ್ನ ಅಧಿಕಾರ ತ್ಯಜಿಸಿದಂತಾಗುತ್ತದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದ್ದು, ಕೆಎಟಿ ಆದೇಶವನ್ನು ಪುರಸ್ಕರಿಸಿದೆ. ಡಾ. ಬಸವನಗೌಡ ಅವರ ವಿರುದ್ಧದ ಆರೋಪ ಸಂಬಂಧಿಸಿದಂತೆ ಅಗತ್ಯವಿದ್ದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲು ಸರ್ಕಾರ ಮುಕ್ತವಾಗಿದೆ ಎಂದು ಹೈಕೋರ್ಟ್ ಹೇಳಿದೆ.