ಬೆಂಗಳೂರು: ಸಹಾಯಕ ಇಂಜಿನಿಯರ್ ಮತ್ತು ಕಿರಿಯ ಇಂಜಿನಿಯರ್ ನೇಮಕಾತಿಗೆ ಸಂಬಂಧಿಸಿದಂತೆ 2024ರಲ್ಲಿ ನಡೆಸಲಾಗಿದ್ದ ಕನ್ನಡ ಪರೀಕ್ಷೆಯನ್ನು ಹೊಸದಾಗಿ ನಡೆಸುವಂತೆ ಕರ್ನಾಟಕ ವಿದ್ಯುತ್ ನಿಗಮ ನಿಯಮಿತ(ಕೆಪಿಸಿಎಲ್) ಗೆ ಹೈಕೋರ್ಟ್ ಆದೇಶಿಸಿದೆ.
ಜೆಇ ಹುದ್ದೆ ಆಕಾಂಕ್ಷಿ ಚಡಚಣಡ ಗೀತಾ ಚೌಹಾಣ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದಂ ಅವರಿದ್ದ ಹೈಕೋರ್ಟ್ ನ್ಯಾಯಪೀಠ ಮಾನ್ಯ ಮಾಡಿದ್ದು, ಈ ಆದೇಶ ನೀಡಲಾಗಿದೆ.
ಕೆಪಿಸಿಎಲ್ ಕನ್ನಡ ಭಾಷಾ ಪರೀಕ್ಷೆ ಮುಕ್ತಾಯಗೊಂಡ ನಂತರ ಕನಿಷ್ಠ ಅಂಕಗಳನ್ನು ನಿಗದಿ ಮಾಡಿದ್ದು, ಇದು ಕಾನೂನುಬಾಹಿರ ಪ್ರಕ್ರಿಯೆಯಾಗಿದೆ. ಜೊತೆಗೆ ನಿಯಮದಲ್ಲಿಯೂ ಇದಕ್ಕೆ ಅವಕಾಶವಿಲ್ಲ. ಹೀಗಾಗಿ ಕೆಪಿಸಿಎಲ್ ಕ್ರಮವನ್ನು ಒಪ್ಪಲಾಗುವುದಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ನಿಗಮ ಹೊಸದಾಗಿ ಕನ್ನಡ ಪರೀಕ್ಷೆಯನ್ನು 100 ಅಂಕಗಳಿಗೆ ಮಾತ್ರ ನಡೆಸಬೇಕು. ಕನಿಷ್ಠ ಅಂಕಗಳು ಎಷ್ಟು ಎಂಬುದನ್ನು ಪರೀಕ್ಷೆಗೆ ಮೊದಲೇ ನಿಗದಿಪಡಿಸಬೇಕು ಎಂದು ನ್ಯಾಯಪೀಠ ತಿಳಿಸಿದೆ.