
ಬೆಂಗಳೂರು: ಹೈಕೋರ್ಟ್ ಹೆಚ್ಚುವರಿ ನ್ಯಾಯಮೂರ್ತಿಯಾಗಿ ವಕೀಲ ಕೆ.ವಿ. ಅರವಿಂದ್ ಅವರನ್ನು ನೇಮಕ ಮಾಡಿ ಕೇಂದ್ರ ಸರ್ಕಾರ ಬುಧವಾರ ಆದೇಶ ಹೊರಡಿಸಿದೆ.
ರಾಷ್ಟ್ರಪತಿಗಳ ಆದೇಶಾನುಸಾರ ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯ ವಿಶೇಷ ಕಾರ್ಯದರ್ಶಿ ರಾಜೇಂದ್ರ ಕಶ್ಯಪ್ ಅವರು ಆದೇಶ ಹೊರಡಿಸಿದ್ದಾರೆ. ಎರಡು ವರ್ಷಗಳ ಅವಧಿಗೆ ಹೈಕೋರ್ಟ್ ಹೆಚ್ಚುವರಿ ನ್ಯಾಯಮೂರ್ತಿಯಾಗಿ ಕೆ.ವಿ. ಅರವಿಂದ್ ಅವರನ್ನು ನೇಮಕ ಮಾಡಲಾಗಿದೆ.
ಕರ್ನಾಟಕ ಹೈಕೋರ್ಟ್ ನಲ್ಲಿ ವಕೀಲರಾಗಿ ಕೆ.ವಿ. ಅರವಿಂದ್ ಸೇವೆ ಸಲ್ಲಿಸಿದ್ದು, ಆದಾಯ ತೆರಿಗೆ ಸೇರಿದಂತೆ ಹಲವು ವಿಷಯಗಳಲ್ಲಿ ಪರಿಣತಿ ಹೊಂದಿದ್ದಾರೆ. ಸುಪ್ರೀಂಕೋರ್ಟ್ ಕೊಲಿಜಿಯಂ ಶಿಫಾರಸ್ಸಿಗೆ ರಾಷ್ಟ್ರಪತಿಗಳು ಅಂಕಿತ ಹಾಕಿದ್ದಾರೆನ್ನಲಾಗಿದೆ.