ಬೆಂಗಳೂರು: ರಾಜ್ಯ ಹೈಕೋರ್ಟ್ ಗೆ ಡಿಸೆಂಬರ್ 19 ರಿಂದ 31 ರವರೆಗೆ ಚಳಿಗಾಲದ ರಜೆ ಘೋಷಣೆ ಮಾಡಲಾಗಿದೆ.
ಈ ಅವಧಿಯಲ್ಲಿ ತುರ್ತು ಅರ್ಜಿಗಳನ್ನು ಮಾತ್ರ ರಜಾಕಾಲದ ಪೀಠಗಳು ವಿಚಾರಣೆ ನಡೆಸಲಿವೆ. ರಜೆಯ ಸಂದರ್ಭದಲ್ಲಿ ಧಾರವಾಡ, ಕಲಬುರ್ಗಿ ಪೀಠದಲ್ಲಿ ನ್ಯಾಯಮೂರ್ತಿಗಳು ವರ್ಚುವಲ್ ಮೂಲಕ ವಿಚಾರಣೆ ನಡೆಸುವರು.
ಬೆಂಗಳೂರಿನ ಪ್ರಧಾನ ಪೀಠದಿಂದ ಡಿಸೆಂಬರ್ 20, 22, 27 ಮತ್ತು 29ರಂದು ಹೈಬ್ರಿಡ್ ವಿಧಾನದಲ್ಲಿ ರಜಾಕಾಲಿನ ಪೀಠಗಳು ಕಾರ್ಯನಿರ್ವಹಿಸಲಿವೆ. ಏಕ ಸದಸ್ಯ ಪೀಠಗಳು 9, 10, 11ನೇ ಕೊಠಡಿಗಳಲ್ಲಿ ವಿಚಾರಣೆ ನಡೆಸಲಿವೆ.
ತಡೆಯಾಜ್ಞೆ, ಮಧ್ಯಂತರ ನಿರ್ದೇಶನ, ತಾತ್ಕಾಲಿಕ ಪ್ರತಿಬಂಧಕಾದೇಶ ಮೊದಲಾದ ಪ್ರಕರಣಗಳನ್ನು ಮಾತ್ರ ರಜಾಕಾಲದ ಪೀಠಗಳು ವಿಚಾರಣೆ ನಡೆಸುತ್ತವೆ. ಮೇಲ್ಮನವಿ ಅರ್ಜಿ, ಮನವಿ, ಬೇರೆ ಯಾವುದೇ ಸಿವಿಲ್ ರೂಪದ ಪ್ರಕರಣಗಳ ವಿಚಾರಣೆ ನಡೆಸುವುದಿಲ್ಲ. ರಜಾಕಾಲದ ಪೀಠಗಳ ನಿರ್ವಹಣೆಗಾಗಿ ನ್ಯಾಯಮೂರ್ತಿಗಳನ್ನು ನಿಯೋಜಿಸಲಾಗಿದೆ ಎಂದು ಹೇಳಲಾಗಿದೆ.