ಬೆಂಗಳೂರು: ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ಫ್ಲೈಟ್(HSRP) ಅಳವಡಿಸದ ವಾಹನ ಸವಾರರ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂಬ ಮಧ್ಯಂತರ ಆದೇಶವನ್ನು ಹೈಕೋರ್ಟ್ ಡಿಸೆಂಬರ್ 4ರ ವರೆಗೆ ವಿಸ್ತರಿಸಿದೆ.
ಈ ಸಂಬಂಧ ಸಲ್ಲಿಕೆಯಾದ ಮೇಲ್ಮನವಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ನೇತೃತ್ವದ ವಿಭಾಗೀಯ ಪೀಠ ಈ ಕುರಿತು ಆದೇಶಿಸಿದೆ.
ಮೇಲ್ಮನವಿದಾರರ ಪರ ವಕೀಲ ಆದಿತ್ಯ ಸೋಂಧಿ ಅವರು, ರಾಜ್ಯ ಸರ್ಕಾರ ಮಧ್ಯಂತರ ಆದೇಶ ಚಾಲ್ತಿಯಲ್ಲಿರಿಸಿ ಏಕಸದಸ್ಯ ನ್ಯಾಯಪೀಠವೇ ಪ್ರಕರಣ ನಿರ್ಧರಿಸಬಹುದು ಎನ್ನುವ ಅಡ್ವೊಕೇಟ್ ಜನರಲ್ ಸಲಹೆ ಬಗ್ಗೆ ಪರಿಶೀಲಿಸಬೇಕೆಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಅಡ್ವೊಕೇಟ್ ಕೆ. ಶಶಿಕಿರಣ್ ಶೆಟ್ಟಿ ಅವರು, ಏಕ ಸದಸ್ಯ ನ್ಯಾಯ ಪೀಠದ ಮಧ್ಯಂತರ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿದ್ದು, ಈಗಾಗಲೇ ಚಾಲ್ತಿಯಲ್ಲಿರುವ ಮಧ್ಯಂತರ ಆದೇಶ ಮುಂದುವರೆಯಲಿ. ಜೊತೆಗೆ ಏಕಸದಸ್ಯ ಪೀಠ ಪ್ರಕರಣ ನಿರ್ಧರಿಸಲು ಆದೇಶಿಸಬಹುದು ಎಂದು ತಿಳಿಸಿದ್ದಾರೆ.
ಇದಕ್ಕೆ ಸಮ್ಮತಿ ನೀಡಿದ ನ್ಯಾಯಪೀಠ ಮಧ್ಯಂತರ ಆದೇಶ ವಿಸ್ತರಿಸಿ ವಿಚಾರಣೆಯನ್ನು ಡಿಸೆಂಬರ್ 4ಕ್ಕೆ ಮುಂದೂಡಿದೆ.