ಬೆಂಗಳೂರು: ಹೈಕೋರ್ಟ್ ನಲ್ಲಿ ಕೋರ್ಟ್ ಹಾಲ್ ಗಳ ಕೊರತೆ ಉಂಟಾಗಿದೆ. ಪ್ರಕರಣಗಳ ದಾಖಲಾತಿ ಮತ್ತು ನ್ಯಾಯಾಂಗ ನೇಮಕಾತಿ ಹೆಚ್ಚಳ ಆಗುತ್ತಿರುವ ಹಿನ್ನೆಲೆಯಲ್ಲಿ ಹೈಕೋರ್ಟ್ ಪ್ರಧಾನ ಪೀಠದ ಕಛೇರಿ ಮತ್ತು ನ್ಯಾಯಮೂರ್ತಿಗಳಿಗೆ ಕೊಠಡಿ ಮತ್ತು ಕೋರ್ಟ್ ಹಾಲ್ ಗಳಿಗೆ ಹೆಚ್ಚುವರಿ ಸ್ಥಳಾವಕಾಶ ಒದಗಿಸಲು ಸಮಗ್ರ ಪ್ರಸ್ತಾವನೆ ಸಿದ್ಧಪಡಿಸಿ ಸಲ್ಲಿಸುವಂತೆ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ತುಮಕೂರಿನ ವಕೀಲ ರಮೇಶ್ ನಾಯಕ್ ಅವರು ಸಲ್ಲಿಸಿದ್ದ ಪಿಐಎಲ್ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಅವರ ನೇತೃತ್ವದ ವಿಭಾಗೀಯ ಪೀಠ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಹೈಕೋರ್ಟ್ ಪ್ರಧಾನ ಪೀಠದ ಕಚೇರಿ, ನ್ಯಾಯಮೂರ್ತಿಗಳ ಕೊಠಡಿ ಮತ್ತು ಕೋರ್ಟ್ ಹಾಲ್ ಗಳಿಗೆ ಹೆಚ್ಚುವರಿ ಸ್ಥಳ ಒದಗಿಸುವ ಸಂಬಂಧ ಸಮಗ್ರ ಪ್ರಸ್ತಾವನೆ ಸಿದ್ಧಪಡಿಸಿ ಸಲ್ಲಿಸಲು ಸೂಚನೆ ನೀಡಿದ್ದು, ವಿಚಾರಣೆಯನ್ನು ಮೂರು ವಾರ ಮುಂದೂಡಲಾಗಿದೆ.