ಬೆಂಗಳೂರು: ಗುತ್ತಿಗೆದಾರರಿಗೆ ಬಾಕಿ ಹಣ ಪಾವತಿಗೆ ಸಂಬಂಧಿಸಿದಂತೆ ಸರ್ಕಾರದ ವಿರುದ್ಧ ಹೈಕೋರ್ಟ್ ಕೆಂಡಾಮಂಡಲವಾಗಿದ್ದು, ಇನ್ನೆಷ್ಟು ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ಪ್ರಶ್ನಿಸಿದೆ.
ಗುತ್ತಿಗೆದಾರರ ಬಾಕಿ ಹಣ ಪಾವತಿಸಲು ವಿಳಂಬ ಮಾಡುತ್ತಿರುವ ರಾಜ್ಯ ಸರ್ಕಾರ ಮತ್ತು ಬಿಬಿಎಂಪಿ ಬಗ್ಗೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಸರ್ಕಾರವೇ ಹೇಳಿರುವಂತೆ ಈಗಾಗಲೇ ಇಬ್ಬರು ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನೆಷ್ಟು ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳಬೇಕು. ಬಾಕಿ ಹಣ ಬಿಡುಗಡೆ ಮಾಡುವುದರಲ್ಲಿ ವಿಳಂಬವೇಕೆ ಎಂದು ಹೈಕೋರ್ಟ್ ಸರ್ಕಾರವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದೆ. ಪೇಮೆಂಟ್ ಪಾವತಿಯಲ್ಲೂ ಹಿರಿತನವೇ ಎಂದು ಹೈಕೋರ್ಟ್ ಖಾರವಾಗಿ ಪ್ರಶ್ನಿಸಿದೆ.
ಬಾಕಿ ಪಾವತಿ ಸಂಬಂಧ ಕೋರ್ಟ್ ಆದೇಶ ಪಾಲಿಸದ ಬಿಬಿಎಂಪಿ ವಿರುದ್ಧ ಮೆಸರ್ಸ್ ನಿಕ್ಷೇಪ್ ಇನ್ಪ್ರಾ ಪ್ರಾಜೆಕ್ಟ್ ಹೂಡಿರುವ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠದ ಮುಂದೆ ಬಂದಿದ್ದು, ಸರ್ಕಾರದ ಬಗ್ಗೆ ಹೈಕೋರ್ಟ್ ಕೆಂಡಾಮಂಡಲವಾಗಿ ತೀವ್ರ ತರಾಟೆಗೆ ತೆಗೆದುಕೊಂಡಿದೆ.
ಸರ್ಕಾರ ದಾಖಲೆಗಳನ್ನು ನೋಡಲಿ, ಇಬ್ಬರು ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗುತ್ತಿಗೆದಾರರನ್ನು ಮೂಲೆಗುಂಪು ಮಾಡಬೇಡಿ. ಬಿಲ್ ಪಾವತಿಗೆ ಅನುಸರಿಸುತ್ತಿರುವ ವಿಧಾನವೇ ತಿಳಿಯುತ್ತಿಲ್ಲ. ಕಾಮಗಾರಿಗಳನ್ನು ಪೂರ್ಣಗೊಳಿಸಿದ ಬಳಿಕ ಮೊತ್ತ ಪಾವತಿಗೆ ಷರತ್ತುಗಳನ್ನು ಹಾಕುವುದು, ಅನಗತ್ಯ ವಿಳಂಬ ಮಾಡುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದೆ.