ಬೆಂಗಳೂರು: ಅಪ್ರಾಪ್ತೆ ಅಪಹರಿಸಿ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಜೀವಿತಾವಧಿ ಶಿಕ್ಷೆಗೆ ಗುರಿಯಾದ ಅಪರಾಧಿಗೆ ತನ್ನ ಅಪ್ರಾಪ್ತ ಪುತ್ರಿಯ ಜೊತೆಗಿರಲು ಹೈಕೋರ್ಟ್ ಪೆರೋಲ್ ನೀಡಿದೆ.
ಒಂದು ತಿಂಗಳ ಕಾಲ ಪುತ್ರಿಯ ಜೊತೆಗಿರಲು ಪೆರೋಲ್ ಮೇಲೆ ಬಿಡುಗಡೆ ಮಾಡುವಂತೆ ಮೈಸೂರು ಕೇಂದ್ರ ಕಾರಾಗೃಹ ಅಧೀಕ್ಷಕರಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಪುತ್ರಿಗೆ ಎರಡು ತಿಂಗಳಾಗಿದ್ದಾಗ ಪತಿ ಜೈಲು ಪಾಲಾಗಿದ್ದು, ಇದುವರೆಗೂ ಪುತ್ರಿಯನ್ನು ನೋಡಲು ಸಾಧ್ಯವಾಗಿಲ್ಲ. ಪುತ್ರಿಯನ್ನು ಕಂಡು ಜೊತೆಗಿರಲು ಮೈಸೂರು ಕೇಂದ್ರ ಕಾರಾಗೃಹದಲ್ಲಿರುವ ತನ್ನ ಪತಿ ಶಮೀವುಲ್ಲಾಗೆ ಒಂದು ತಿಂಗಳ ಕಾಲ ಪೆರೋಲ್ ನೀಡಲು ಜೈಲು ಅಧೀಕ್ಷಕರಿಗೆ ನಿರ್ದೇಶಿಸಬೇಕೆಂದು ಕೋರಿ ಅಮ್ರಿನ್ ತಾಜ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಅವರ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ ಅರ್ಜಿದಾರರ ಪತಿ ಪೆರೋಲ್ ಗೆ ಅರ್ಹರಾಗಿದ್ದಾರೆ. ಅರ್ಜಿದಾರ ಮನವಿಯಂತೆ ಶಮೀವುಲ್ಲಾ ಅವರನ್ನು 2023ರ ನವೆಂಬರ್ 6ರಿಂದ ಡಿಸೆಂಬರ್ 5ರವರೆಗೆ ಪೆರೋಲ್ ಮೇಲೆ ಬಿಡುಗಡೆ ಮಾಡುವ ಸಂಬಂಧ ಆದೇಶ ಹೊರಡಿಸಬೇಕು ಎಂದು ತಿಳಿಸಿದೆ.
ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರ ಎಸಗಿದ್ದ ಪ್ರಕರಣದಲ್ಲಿ ಪೋಕ್ಸೋ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆಯಡಿ ಶಮೀವುಲ್ಲಾ ದೋಷಿಯಾಗಿದ್ದಾನೆ. ಚಾಮರಾಜನಗರ ಜಿಲ್ಲಾ ನ್ಯಾಯಾಲಯ ಆತನಿಗೆ ಜೀವಿತಾವಧಿಯ ಕಾಲ ಜೈಲು ಶಿಕ್ಷೆ, 4.5 ಲಕ್ಷ ರೂ. ದಂಡ ವಿಧಿಸಿ 2020ರ ಅಕ್ಟೋಬರ್ 27ರಂದು ಆದೇಶ ನೀಡಿದ್ದು, ಮೈಸೂರು ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾನೆ. ಆಗಸ್ಟ್ 30ರಂದು ಆತನ ಪತ್ನಿ ಪೆರೋಲ್ ಕೋರಿ ಅರ್ಜಿ ಸಲ್ಲಿಸಿದ್ದರು. ಗಂಭೀರ ಪ್ರಕರಣದಲ್ಲಿ ಜೈಲು ಶಿಕ್ಷೆಯಾದ ಕಾರಣ ಪೆರೋಲ್ ಗೆ ಆತ ಅರ್ಹನಲ್ಲ ಎಂದು ಜೈಲು ಅಧೀಕ್ಷಕರು ಅರ್ಜಿ ತಿರಸ್ಕರಿಸಿದ್ದರಿಂದ ಹೈಕೋರ್ಟ್ ಮೊರೆ ಹೋಗಿದ್ದರು.