ಬೆಂಗಳೂರು: 132 ಸಹಾಯಕ ಅಭಿಯೋಜಕ ನೇಮಕಾತಿಗೆ ಸರ್ಕಾರ ಆದೇಶ ನೀಡಿದ್ದು, 49 ಸಹಾಯಕ ಸರ್ಕಾರಿ ಅಭಿಯೋಜಕರಿಗೆ ಬಡ್ತಿ ನೀಡಲಾಗಿದೆ.
ರಾಜ್ಯದಾದ್ಯಂತ ಖಾಲಿ ಇರುವ ಸರ್ಕಾರಿ ಅಭಿಯೋಜಕರ ಹುದ್ದೆಗೆ ಸರ್ಕಾರಕ್ಕೆ ಅಗತ್ಯ ನಿರ್ದೇಶನ ನೀಡುವಂತೆ ಹೈಕೋರ್ಟ್ ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡಿರುವ ಪಿಐಎಲ್ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ನೇತೃತ್ವದ ವಿಭಾಗೀಯ ಪೀಠಕ್ಕೆ ಸರ್ಕಾರಿ ವಕೀಲರು ಈ ಕುರಿತು ಮಾಹಿತಿ ನೀಡಿದ್ದಾರೆ.
ಹೊಸದಾಗಿ ನೇಮಕವಾದ 132 ಮಂದಿಗೆ ಅಭಿಯೋಜನಾ ಇಲಾಖೆಯಿಂದ ನೇಮಕಾತಿ ಆದೇಶ ಕಳುಹಿಸಲಾಗಿದೆ. 49 ಸಹಾಯಕ ಸರ್ಕಾರಿ ಅಭಿಯೋಜಕರಿಗೆ ಹಿರಿಯ ಸರ್ಕಾರಿ ಅಭಿಯೋಜಕ ಹುದ್ದೆಗೆ ಬಡ್ತಿ ನೀಡಲಾಗಿದೆ ಎಂದು ಮಾಹಿತಿ ನೀಡಲಾಗಿದೆ.
ನೇಮಕಾತಿ ಪ್ರಕ್ರಿಯೆಯನ್ನು ಶೀಘ್ರವೇ ಪೂರ್ಣಗೊಳಿಸಲಾಗುವುದು ಎಂದು ಸರ್ಕಾರ ತಿಳಿಸಿದ್ದು, ಹೈಕೋರ್ಟ್ ಎಲ್ಲ ಮಾಹಿತಿ ದಾಖಲಿಸಿಕೊಂಡು ಮೂರು ವಾರಗಳ ಬಳಿಕ ಅಂತಿಮವಾಗಿ ಕೈಗೊಂಡ ಕ್ರಮಗಳ ಕುರಿತು ವರದಿ ಸಲ್ಲಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿದೆ.