
ಬೆಂಗಳೂರು: ಮರ ಬೆಳೆಸುವ ಸಲುವಾಗಿ ಸರ್ಕಾರ ಜಮೀನು ನೀಡಿದ್ದರೆ ಆ ಜಮೀನಿನ ಮಾಲೀಕತ್ವವನ್ನೇ ನೀಡಿದಂತಲ್ಲ ಎಂದು ಹೈಕೋರ್ಟ್ ಹೇಳಿದೆ.
ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ, ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಕುರಿತಾಗಿ ಆದೇಶ ನೀಡಿದೆ. ಸಾಮಾನ್ಯವಾಗಿ ದತ್ತಿ ನೀಡಿದ ಜಮೀನಿನ ಮಾಲೀಕತ್ವ ಜಮೀನು ಪಡೆದವನದ್ದಾಗಿರುತ್ತದೆ. ಒಂದು ವೇಳೆ ಷರತ್ತು ಬದ್ಧವಾಗಿ ದತ್ತಿ ನೀಡಿದ್ದರೆ ಆ ಷರತ್ತಿನ ಪಾಲನೆ ಆಗದಿದ್ದ ಸಂದರ್ಭದಲ್ಲಿ ಮಾಲೀಕತ್ವ ದತ್ತಿ ನೀಡಿದವನ ಪಾಲಾಗುತ್ತದೆ. ಮರ ಬೆಳೆಸುವ ಉದ್ದೇಶದಿಂದ ಜಮೀನು ದತ್ತಿ ನೀಡಿದ್ದರೆ ಆ ಜಮೀನಿನಲ್ಲಿರುವ ಮರಗಳ ಮಾಲೀಕತ್ವ ದತ್ತಿ ಪಡೆದವನಿಗೆ ಸೇರುತ್ತದೆ ಹೊರತೂ ಜಮೀನು ಅಲ್ಲ ಎಂದು ಆದೇಶ ನೀಡಲಾಗಿದೆ.
ದತ್ತಿ ನೀಡಿದ ಜಮೀನಿನಲ್ಲಿ ಬೆಳೆದ ಮರಗಳ ಸಂಪೂರ್ಣ ಮಾಲೀಕತ್ವ ದತ್ತಿ ಪಡೆದವನಿಗೆ ಸೇರುತ್ತದೆ. ಆದ್ದರಿಂದ ಆ ಮರಗಳಿಗೆ ಪರಿಹಾರ ಪಡೆಯಲು ದತ್ತಿ ಪಡೆದವರು ಅರ್ಹರಾಗಿರುತ್ತಾರೆ. ಒಂದು ವೇಳೆ ಆ ಜಮೀನಿನಲ್ಲಿ ಬೆಳೆದ ಮರ ತೆಗೆದಿದ್ದರೆ, ತೆಗೆಯಲು ಅವಕಾಶ ನೀಡಿದ್ದರೆ ಪರಿಹಾರ ನೀಡುವ ಅಗತ್ಯವಿಲ್ಲ ಎಂದು ಹೈಕೋರ್ಟ್ ತಿಳಿಸಿದೆ.
ತುಮಕೂರಿನ ಯಲದಡ್ಲು ಗ್ರಾಮದಲ್ಲಿ ನಂಜುಂಡಪ್ಪ ಮತ್ತು ಇತರರ ಪೂರ್ವಜರಿಗೆ ಮರ ಬೆಳೆಸಲು ನೀಡಿದ್ದ ಜಮೀನನ್ನು ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ ಪರಿಹಾರ ನೀಡದೆ ಸ್ವಾಧೀನಕ್ಕೆ ಮುಂದಾಗಿತ್ತು. ಈ ಕ್ರಮ ಪ್ರಶ್ನಿಸಿ ಸಲ್ಲಿಸಿದ ಅರ್ಜಿಯನ್ನು ಹೈಕೋರ್ಟ್ ಏಕ ಸದಸ್ಯ ಪೀಠ ವಜಾಗೊಳಿಸಿದ್ದು, ವಿಭಾಗೀಯ ಪೀಠದಲ್ಲಿ ಮೇಲ್ಮನವಿ ವಿಚಾರಣೆ ನಡೆಸಿದ ಹೈಕೋರ್ಟ್ ಈ ಆದೇಶ ನೀಡಿದೆ.