ಬೆಂಗಳೂರು: ಮದುವೆಯಾದ ನಂತರ ಕೆಲವೇ ತಿಂಗಳಲ್ಲಿ ಗಂಡನನ್ನು ತ್ಯಜಿಸಿ ತವರು ಸೇರಿದ್ದ ಪತ್ನಿ ಮೂರು ವರ್ಷ ಕಳೆದರೂ ಗಂಡನ ಮನೆಗೆ ವಾಪಸ್ ಆಗದ ಹಿನ್ನೆಲೆಯಲ್ಲಿ ಕೌಟುಂಬಿಕ ನ್ಯಾಯಾಲಯ ವಿವಾಹ ವಿಚ್ಛೇದನ ನೀಡಿ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.
ಬೆಂಗಳೂರಿನ ಮಹಿಳೆ ಕೋಲಾರದ ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಪರಿಶೀಲಿಸಿದ ಹೈಕೋರ್ಟ್ ನ್ಯಾಯಮೂರ್ತಿ ಅಲೋಕ್ ಅರಾಧೆ, ನ್ಯಾಯಮೂರ್ತಿ ವಿಜಯಕುಮಾರ್ ಎ. ಪಾಟಿಲ್ ಅವರಿದ್ದ ವಿಭಾಗಿಯ ಪೀಠ ಕೌಟುಂಬಿಕ ನ್ಯಾಯಾಲಯ ಹೊರಡಿಸಿದ್ದ ಆದೇಶವನ್ನು ಎತ್ತಿ ಹಿಡಿದಿದೆ.
ಕೌಟುಂಬಿಕ ನ್ಯಾಯಾಲಯದ ಆದೇಶದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದ ಹೈಕೋರ್ಟ್ ಗಂಡನ ಮನೆಗೆ ಹಿಂತಿರುಗದ ಪತ್ನಿಯ ವಿವಾಹ ವಿಚ್ಛೇದನ ಆದೇಶ ಎತ್ತಿ ಹಿಡಿದಿದೆ. ಪತಿಯ ಅರ್ಜಿಗೆ ಪತ್ನಿ ಉತ್ತರ ನೀಡದಿದ್ದಾಗ ಆತನ ಹೇಳಿಕೆ ಪರಿಗಣಿಸಿ ನ್ಯಾಯಾಲಯ ತೀರ್ಮಾನ ಕೈಗೊಳ್ಳಬೇಕಾಗುತ್ತದೆ. ಕೌಟುಂಬಿಕ ನ್ಯಾಯಾಲಯ ಅರ್ಜಿದಾರ ಮಹಿಳೆಗೆ ನೋಟಿಸ್ ಜಾರಿ ಮಾಡಿದ್ದರೂ ಯಾವುದೇ ಆಕ್ಷೇಪಣೆ ಸಲ್ಲಿಸಿಲ್ಲ. ಪತ್ನಿ ಸತತವಾಗಿ ಎರಡು ವರ್ಷಕ್ಕೂ ಅಧಿಕ ಕಾಲ ಪತಿಯಿಂದ ದೂರ ಇರುವುದರ ಕಾರಣಕ್ಕೆ ಪತಿಯನ್ನು ಪರಿತ್ಯಾಗ ಮಾಡಿರುವುದು ಸಾಬೀತಾಗುತ್ತದೆ. ಹಾಗಾಗಿ ಕೌಟುಂಬಿಕ ನ್ಯಾಯಾಲಯದ ಆದೇಶದಲ್ಲಿ ಮಧ್ಯ ಪ್ರವೇಶದ ಅಗತ್ಯತೆ ಕಂಡು ಬರುತ್ತಿಲ್ಲ ಎಂದು ಹೇಳಿದ ಹೈಕೋರ್ಟ್ ನ್ಯಾಯಪೀಠ ಅರ್ಜಿಯನ್ನು ವಜಾಗೊಳಿಸಿದೆ.