ಬೆಂಗಳೂರು: ಮಲಗುರುವ ಪದ್ಧತಿ ಅಮಾನುಷ, ಮಾನವೀಯತೆಗೆ ಅವಮಾನ ಎಂದು ಹೈಕೋರ್ಟ್ ಆಕ್ರೋಶ ವ್ಯಕ್ತಪಡಿಸಿದೆ.
ರಾಜ್ಯದಲ್ಲಿ ಮನುಷ್ಯರಿಂದ ಮಲಗುಂಡಿ ಸ್ವಚ್ಛಗೊಳಿಸುವ ಪದ್ಧತಿ ಜೀವಂತವಾಗಿರುವ ಬಗ್ಗೆ ಸ್ವಯಂ ಪ್ರೇರಿತ ಪಿಐಎಲ್ ದಾಖಲಿಸಿಕೊಂಡಿರುವ ಹೈಕೋರ್ಟ್ ಜಾತಿ ಮತ್ತಿತರ ಕಾರಣದಿಂದ ಕೆಲವರು ಪ್ರಾಣಿಗಳಿಗಿಂತಲೂ ಕನಿಷ್ಠ ಸ್ಥಿತಿಯಲ್ಲಿ ಬದುಕುತ್ತಿರುವುದು ದುರ್ದೈವದ ಸಂಗತಿಯಾಗಿದೆ. ವ್ಯಕ್ತಿ ಒಬ್ಬ ನಿರ್ದಿಷ್ಟ ಸಮುದಾಯ ಹಾಗೂ ಜಾತಿಯಲ್ಲಿ ಜನಿಸಿದ ಮಾತ್ರಕ್ಕೆ ಇಂತಹ ಅನಿಷ್ಠ ಕೆಲಸಕ್ಕೆ ಬಳಸಿಕೊಳ್ಳುವುದು ಮಾನವೀಯತೆಗೆ ಮಾಡುವ ಅವಮಾನ ಎಂದು ಕಳವಳ ವ್ಯಕ್ತಪಡಿಸಿದೆ.
ಬುಧವಾರ ರಾಜ್ಯದಲ್ಲಿ ಮಲಗುರುವ ಪದ್ಧತಿ ಜೀವಂತವಾಗಿರುವ ಬಗ್ಗೆ ಪತ್ರಿಕೆ ವರದಿ ಪ್ರಸ್ತಾಪಿಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಅವರು, ಇದು ಆತಂಕಕಾರಿ ಸುದ್ದಿಯಾಗಿದೆ. ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳ ನಂತರವೂ ನಿರ್ದಿಷ್ಟ ಸಮುದಾಯದಲ್ಲಿ ಜನಿಸಿದ, ತನ್ನದಲ್ಲದ ದುರಾದೃಷ್ಟಕ್ಕೆ ಇಂತಹ ಕೆಲಸ ಮಾಡಬೇಕಿದೆ. ಇದು ಮಾನವೀಯತೆಗೆ ನಾಚಿಕೆಯಾಗುವ ಸಂಗತಿ. ಮಲಗುಂಡಿ ಸ್ವಚ್ಛಗೊಳಿಸಲು ಒಂದು ಗಂಟೆಗೆ 2,000 ರೂ. ವೆಚ್ಚವಾಗುತ್ತದೆ ಅಷ್ಟೇ. ಈ ಕೆಲಸಕ್ಕೆ ಯಂತ್ರ ಬಳಸಬಹುದಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಇದಕ್ಕೆ ದನಿಗೂಡಿಸಿದ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರು, ಇದು ಯಂತ್ರ ಸಮಸ್ಯೆಯಲ್ಲ, ಮನಸ್ಥಿತಿ ಸಮಸ್ಯೆ ಎಂದು ಹೇಳಿದ್ದಾರೆ. ಅರ್ಜಿ ಸಂಬಂಧ ನ್ಯಾಯಾಲಯಕ್ಕೆ ಅಗತ್ಯ ಸಲಹೆ, ಮಾಹಿತಿ ನೀಡಲು ವಕೀಲರಾದ ಶ್ರೀಧರ್ ಪ್ರಭು ಅವರನ್ನು ಅಮಿಕಸ್ ಕ್ಯೂರಿಯನ್ನಾಗಿ ನೇಮಿಸಿದ ನ್ಯಾಯಪೀಠ ಅರ್ಜಿ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದೆ.