ಬೆಂಗಳೂರು: ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಕ್ಷೇತ್ರಗಳಿಗೆ ಮೀಸಲಾತಿ ಅಂತಿಮಗೊಳಿಸದ ರಾಜ್ಯ ಸರ್ಕಾರದ ವಿರುದ್ಧ ಚುನಾವಣಾ ಆಯೋಗ ಹೈಕೋರ್ಟ್ ಮೆಟ್ಟಿಲೇರಿದೆ. ಜಿಲ್ಲಾ ಪಂಚಾಯಿತಿ ತಾಲೂಕು ಪಂಚಾಯಿತಿ ಮೀಸಲಾತಿ ಅಂತಿಮಗೊಳಿಸದಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದೆ.
ನ್ಯಾಯಾಲಯಕ್ಕೆ ನೀಡಿದ ಭರವಸೆಯಂತೆ ನಿಗದಿತ ಅವಧಿಯಲ್ಲಿ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯತಿ ಕ್ಷೇತ್ರಗಳಿಗೆ ಮೀಸಲಾತಿ ಅಂತಿಮಗೊಳಿಸದ ರಾಜ್ಯ ಸರ್ಕಾರದ ನಡೆ ಆಕ್ಷೇಪಿಸಿ ರಾಜ್ಯ ಚುನಾವಣಾ ಆಯೋಗ ಹೈಕೋರ್ಟಿಗೆ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದೆ. ಸೋಮವಾರ ಈ ಕುರಿತಾಗಿ ಆಯೋಗ ಸಲ್ಲಿಸಿದ ಸಿವಿಲ್ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ನೇತೃತ್ವದ ವಿಭಾಗೀಯ ಪೀಠದಲ್ಲಿ ನಡೆಯಿತು.
ವಿಚಾರಣೆಯ ವೇಳೆ ಹೆಚ್ಚುವರಿ ಅಡ್ವೊಕೇಟ್ ಜನರಲ್ ಪ್ರತಿಮಾ ಹೊನ್ನಾಪುರ ಅವರು, ಅರ್ಜಿಗೆ ಸಂಬಂಧಿಸಿದಂತೆ ಅಡ್ವೊಕೇಟ್ ಜನರಲ್ ಶಶಕಿರಣ್ ಶೆಟ್ಟಿ ಅವರು ವಾದ ಮಂಡಿಸಲಿದ್ದಾರೆ. ಇದಕ್ಕೆ ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದ್ದು, ಇದನ್ನು ಪರಿಗಣಿಸಿದ ನ್ಯಾಯಪೀಠ ವಿಚಾರಣೆಯನ್ನು ಜುಲೈ 11ಕ್ಕೆ ಮುಂದೂಡಿದೆ.
ಈ ಹಿಂದೆ ಅವಧಿ ಮುಗಿದ ಜಿಲ್ಲಾ ಪಂಚಾಯತಿ ತಾಲೂಕು ಪಂಚಾಯಿತಿಗೆ ಚುನಾವಣೆ ನಡೆಸಲು ಕೋರಿ ಚುನಾವಣಾ ಆಯೋಗ ಪಿಐಎಲ್ ಸಲ್ಲಿಸಿದ್ದು, ಕ್ಷೇತ್ರ ಮರು ವಿಂಗಡಣೆಗೆ ಆಯೋಗ ರಚಿಸಿರುವುದನ್ನು ಕೂಡ ಆಯೋಗ ಪ್ರಶ್ನಿಸಿತ್ತು. ವಿಚಾರಣೆಯ ವೇಳೆ 2023ರ ಡಿಸೆಂಬರ್ 19ರಂದು ಪುನರ್ ವಿಂಗಡಣೆ ಅಧಿಸೂಚನೆ ಹೊರಡಿಸುವುದಾಗಿ ಸರ್ಕಾರ ಹೇಳಿತ್ತು. ಸರ್ಕಾರದ ಈ ಹೇಳಿಕೆಯನ್ನು ಪರಿಗಣಿಸಿ ಹೈಕೋರ್ಟ್ ಅರ್ಜಿಯನ್ನು ಇತ್ಯರ್ಥಪಡಿಸಿತು. ಆದರೆ ಸರ್ಕಾರ ಹೇಳಿದಂತೆ ನಡೆದುಕೊಂಡಿಲ್ಲ ಎಂದು ಈಗ ಚುನಾವಣಾ ಆಯೋಗ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದೆ.