ಬೆಂಗಳೂರು: ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಬಳಿ ಡಿಎಲ್ ಇಲ್ಲದ ಮಾತ್ರಕ್ಕೆ ಅಪಘಾತಕ್ಕೆ ಆತನ ನಿರ್ಲಕ್ಷವೇ ಕಾರಣ ಎಂದು ಹೇಳಲಾಗದು ಎಂದು ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.
ರಾಯಚೂರಿನಲ್ಲಿ 6 ವರ್ಷಗಳ ಹಿಂದೆ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ ದ್ವಿಚಕ್ರ ವಾಹನ ಸವಾರನ ಕುಟುಂಬಕ್ಕೆ ಮೋಟಾರು ವಾಹನ ಅಪಘಾತ ನ್ಯಾಯಮಂಡಳಿ ಆದೇಶಿಸಿದ್ದ 8.8 ಲಕ್ಷ ರೂ. ಪರಿಹಾರ ಮೊತ್ತವನ್ನು 15.8 ಲಕ್ಷ ರೂ.ಗೆ ಹೆಚ್ಚಳ ಮಾಡಿದೆ.
ಕುಡಿಯುವ ನೀರು ಮಾರಾಟ ಮಾಡುತ್ತಿದ್ದ ಹುಲಿರಾಜ್(20) ಅವರು 2017ರ ನವೆಂಬರ್ 10ರಂದು ಬೈಕ್ ನಲ್ಲಿ ರಾಯಚೂರಿನ ಯರಮರಸ್ ಗೆ ತೆರಳುವಾಗ ಜೀಪ್ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟಿದ್ದರು. ಅವರ ತಾಯಿ, ಸಹೋದರರು ಹೈಕೋರ್ಟ್ ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದು, ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿಗಳಾದ ಎಂ. ನವಾಜ್ ಮತ್ತು ರಾಜೇಶ್ ರೈ ಅವರಿದ್ದ ವಿಭಾಗೀಯ ಪೀಠ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಬಳಿ ಡಿಎಲ್ ಇಲ್ಲವೆಂದ ಮಾತ್ರಕ್ಕೆ ಘಟನೆಗೆ ಆತನ ನಿರ್ಲಕ್ಷವೇ ಕಾರಣ ಎಂದು ಹೇಳಲಾಗದು ಎಂದು ಅಭಿಪ್ರಾಯಪಟ್ಟಿದೆ.
ಪರಿಹಾರ ಮೊತ್ತವನ್ನು ಹೆಚ್ಚಳ ಮಾಡಿ ಹೈಕೋರ್ಟ್ ಆದೇಶಿಸಿದೆ. ಅಪಘಾತದಲ್ಲಿ ಜೀಪ್ ಚಾಲಕನ ನಿರ್ಲಕ್ಷ ದೃಢಪಟ್ಟಿದ್ದರೂ ದ್ವಿಚಕ್ರ ವಾಹನ ಸವಾರನ ಬಳಿ ಡಿಎಲ್ ಇಲ್ಲದೆ ಇರುವ ಅಂಶವನ್ನು ಪರಿಗಣಿಸಬೇಕಾಗುತ್ತದೆ ಎಂದು ಹೇಳಿದ ಹೈಕೋರ್ಟ್ ನ್ಯಾಯಪೀಠ, 15.8 ಲಕ್ಷ ರೂ. ಪರಿಹಾರ ನೀಡುವಂತೆ ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿಗೆ ಆದೇಶಿಸಿದೆ.